ಕಡಬ: ದ.ಕ. ಜಿಲ್ಲಾ ಪಂಚಾಯಿತಿ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮಂಗಳೂರು, ವಿಟ್ಲ ಪಿಎಂಶ್ರೀ ಸರ್ಕಾರಿ ಪ್ರೌಢಶಾಲೆ ಹಾಗೂ ಕ್ರೀಡಾ ಭಾರತಿ ಮಂಗಳೂರು ಸಹಯೋಗದಲ್ಲಿ ಜಿಲ್ಲಾಮಟ್ಟದ 17ರ ವಯೋಮಾನದ ಬಾಲಕ- ಬಾಲಕಿಯರ ಕಬಡ್ಡಿ ಪಂದ್ಯಾಟದ ಬಾಲಕಿಯರ ವಿಭಾಗದಲ್ಲಿ ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದಿದೆ. ಆ ಮೂಲಕ ವಿಭಾಗಮಟ್ಟಕ್ಕೆ ಆಯ್ಕೆಯಾಗಿದೆ. ಪಂದ್ಯಾಟದಲ್ಲಿ ಬೆಸ್ಟ್ ಆಲ್ ರೌಂಡರ್ ಪ್ರಶಸ್ತಿಯನ್ನು ಧನ್ವಿ ಎಂ. ಮತ್ತು ಬೆಸ್ಟ್ ಡಿಫೆಂಡರ್ ಪ್ರಶಸ್ತಿಯನ್ನು ಸಿಂಚನಾ ಎಸ್. ಪಡೆದಿದ್ದಾರೆ. ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಣ ಶಿಕ್ಷಕಿ ಪ್ರಫುಲ್ಲ ರೈ ಮತ್ತು ಮುಖ್ಯಗುರು ಸತೀಶ್ ಭಟ್ ಮಾರ್ಗದರ್ಶನದಲ್ಲಿ ಮಾಧವ ಬಿ.ಕೆ., ಜಸ್ವಂತ್ ಹಾಗೂ ಮಂಜುನಾಥ್ ತರಬೇತಿ ನೀಡಿದ್ದರು.