ಬೆಂಗಳೂರು/ಚೆನ್ನೈ: ಸೂಪರ್ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ಜೈಲರ್ ಚಿತ್ರ ಇದೇ ಆಗಸ್ಟ್ 10ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದ್ದು, ನೆಚ್ಚಿನ ನಟನನ್ನೂ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. 2021ರಲ್ಲಿ ಬಿಡುಗಡೆಯಾಗಿದ್ದ ಅಣ್ಣಾತ್ತೆ ಚಿತ್ರದಲ್ಲಿ ಕಡೆಯದಾಗಿ ಕಾಣಿಸಿಕೊಂಡಿದ್ದ ರಜನಿಕಾಂತ್ ಈಗ ಮತ್ತೊಮ್ಮೆ ಬೆಳ್ಳಿತೆರೆಯ ಮೇಲೆ ರಾರಾಜಿಸಲು ಬರುತ್ತಿದ್ದಾರೆ.
ಜೈಲರ್ ಚಿತ್ರ ಬಿಡುಗಡೆ ಹಿನ್ನಲೆ ತಮಿಳುನಾಡು ಮೂಲದ ಕಂಪನಿಯೊಂದು ಆಗಸ್ಟ್ 10ರಂದು ತನ್ನ ಉದ್ಯೋಗಿಗಳಿಗೆ ರಜೆ ಘೋಷಿಸಿದೆ. ಉನೊ ಅಕ್ವಾ ಕೇರ್ ಎಂಬ ಸಂಸ್ಥೆಯೂ ಚಿತ್ರ ಬಿಡುಗಡೆ ನಿಮಿತ್ತ ತನ್ನ ಕೆಲಸಗಾರರಿಗೆ ರಜೆಯನ್ನೂ ನೀಡಿದೆ.
ಈ ಕುರಿತು ಟ್ವೀಟ್ ಮಾಡಿರುವ ಸಂಸ್ಥೆಯ ಮುಖ್ಯಸ್ಥರು ಜೈಲರ್ ಚಿತ್ರ ಬಿಡುಗಡೆ ನಿಮಿತ್ತ ಆಗಸ್ಟ್ 10ರಂದು ಕಂಪನಿಯ ಉದ್ಯೋಗಿಗಳಿಗೆ ಸಾರ್ವತ್ರಿಕ ರಜೆಯನ್ನೂ ಘೋಷಿಸಲಾಗಿದೆ. ಜೈಲರ್ ಚಿತ್ರ ವೀಕ್ಷಿಸಲು ಇಷ್ಟಪಡುವ ನಮ್ಮ ಕಂಪನಿಯ ಉದ್ಯೋಗಿಗಳಿಗೆ ನಾವು ಅವತ್ತಿನ ದಿನದ ಟಿಕೆಟ್ಅನ್ನು ಹಂಚುತ್ತೇವೆ ಎಂದು ತಿಳಿಸಲಾಗಿದೆ.
ಇದನ್ನೂ ಓದಿ: ಸಚಿವ ಚೆಲುವರಾಯಸ್ವಾಮಿ ವಿರುದ್ಧ ದೂರು; ಇದರ ಹಿಂದಿರುವುದು ಬಿಜೆಪಿಯ ಫೇಕ್ ಫ್ಯಾಕ್ಟರಿಯೋ, ಪೆನ್ ಡ್ರೈವ್ ಶೂರರೋ: ಕಾಂಗ್ರೆಸ್
ನಮ್ಮ ತಾತ-ಮುತ್ತಾತನ ಕಾಲದಿಂದ ನಾವು ರಜನಿಕಾಂತ್ ಅವರ ಚಿತ್ರಗಳನ್ನೂ ನೋಡುತ್ತಾ ಬೆಳೆದಿದ್ದೇವೆ. ಈ ರಜೆ ಅವರಿಗೆ ಸಮರ್ಪಣೆ. ಚೆನ್ನೈ, ಬೆಂಗಳೂರು ಸೇರಿದಂತೆ ಇದು ಶಾಖೆಗಳಿಗೂ ಅನ್ವಯವಾಗುತ್ತದೆ ಎಂದು ಸಂಸ್ಥೆಯ ಮುಖ್ಯಸ್ಥರು ಟ್ವೀಟ್ ಮಾಡಿರುವ ನೋಟಿಸ್ನಲ್ಲಿ ಉಲ್ಲೇಖಿಸಲಾಗಿದೆ.
ಜೈಲರ್ ಚಿತ್ರಕ್ಕೆ ನೆಲ್ಸನ್ ದಿಲೀಪ್ ಕುಮಾರ್ ಆ್ಯಕ್ಷನ್ ಕಟ್ ಹೇಳಿದ್ದು, ಅನಿರುದ್ಧ ರವಿಂಚಂದರ್ ಸಂಗೀತ ಸಂಯೋಜಿಸಿದ್ದಾರೆ. ವಿಜಯ್ ಕಾರ್ತಿಕ್ ಕಣ್ಣನ್ ಛಾಯಾಗ್ರಾಕರಾಗಿ ಕೆಲಸ ಮಾಡಿದ್ದು, ಕಲಾನಿಧಿ ಮಾರನ್ ಜೈಲರ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.