ಜಿಲ್ಲೆ

ಆರ್​ಆರ್​ ನಗರ ಬೈ ಎಲೆಕ್ಷನ್​: ಮೂರು ಪಕ್ಷಗಳ ಅಭ್ಯರ್ಥಿ ಬೆನ್ನಿಗೆ ನಿಂತಿದ್ದಾರೆ ಆ ನಾಯಕರು

arunakunigal

ಬೆಂಗಳೂರು: ಆರ್ ಆರ್ ನಗರ ವಿಧಾನಸಭಾ ಕ್ಷೇತ್ರದ ಬೈ ಎಲೆಕ್ಷನ್​ ರಂಗೇರಿದ್ದು, ಇಂದಿನಿಂದ(ಅ.19) ಅಧಿಕೃತ ಬಹಿರಂಗ ಪ್ರಚಾರಗಳಿಗೆ ಮೂರು ಪಕ್ಷಗಳ ನಾಯಕರು ಇಳಿದಿದ್ದಾರೆ.

ಆರ್​ಆರ್​ ನಗರದಲ್ಲಿ ಶತಾಯಗತಾಯ ಗೆಲ್ಲಲೇ ಬೇಕೆಂದು ಪಣತೊಟ್ಟಿರುವ ಕಾಂಗ್ರೆಸ್​, ಜೆಡಿಎಸ್​ ಮತ್ತು ಬಿಜೆಪಿ ಮೂರು ಪಕ್ಷಗಳು ಅಭ್ಯರ್ಥಿಗಳನ್ನು ಅಳೆದು ತೂಕಿ ಅಖಾಡಕ್ಕಿಳಿಸಿವೆ. ಈ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಪ್ರತಿಷ್ಠೆಯ ಕಣ ವಾಗಿದೆ. ಬಿಜೆಪಿ ಅಭ್ಯರ್ಥಿ ಮುನಿರತ್ನಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಮತ್ತು ಡಿಸಿಎಂ ಅಶ್ವಥನಾರಾಯಣ ಸಾಥ್​ ನೀಡಿದ್ದು, ಕಾಂಗ್ರೆಸ್ ಅಭ್ಯರ್ಥಿ ಕುಸುಮಾರನ್ನು ಗೆಲ್ಲಿಸಲು ಡಿಕೆಶಿ ರಣತಂತ್ರದಂತೆ ಸಂಸದ ಡಿ.ಕೆ. ಸುರೇಶ್ ಅಖಾಡಕ್ಕಿಳಿದಿದ್ದಾರೆ. ಇನ್ನು ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ಪರ ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ಬಿರುಸಿನ ಪ್ರಚಾರ ಸಭೆ ನಡೆಸುತ್ತಿದ್ದಾರೆ.

ಮುನಿರತ್ನ ವಿರುದ್ಧ ಕಾಂಗ್ರೆಸ್​ ಗೆಲುವಿಗೆ ಮಾಸ್ಟರ್ ಪ್ಲ್ಯಾನ್​ ರೂಪಿಸಿರುವ ಡಿಕೆ ಬ್ರದರ್ಸ್, ಮಹಿಳಾ ಘಟಕ ಮತ್ತು ಎನ್ಎಸ್ಐ, ಯೂತ್ ಕಾಂಗ್ರೆಸ್ ಘಟಕ ಮತ್ತು ಒಬಿಸಿ ಘಟಕಗಳನ್ನ ಕ್ಷೇತ್ರದಲ್ಲಿಯೇ ಟಿಕಾಣಿ ಹೂಡಲು ಸೂಚನೆ ನೀಡಿದ್ದಾರೆ. ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಕ್ಷೇತ್ರ ಸಂಚಾರ ಮಾಡುತ್ತಿರುವ ಮುನಿರತ್ನ, ಮನೆ ಮನೆ ಪ್ರಚಾರ ಶುರು ಮಾಡಿದ್ದಾರೆ.

ಉಭಯ ಪಕ್ಷಗಳಿಂದ ಜೆಡಿಎಸ್ ಕಾರ್ಯಕರ್ತರನ್ನು ಸೆಳೆಯುವ ತಂತ್ರ ಫಲಿಸುತ್ತಿದೆ. ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಎಚ್. ಚಂದ್ರಶೇಖರ್ ಸೋಮವಾರ ಮಧ್ಯಾಹ್ನ ಡಿಕೆಶಿ ಸಮ್ಮುಖದಲ್ಲಿ ಕಾಂಗ್ರೆಸ್​ ಸೇರ್ಪಡೆಯಾಗುತ್ತಿದ್ದಾರೆ.