ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಮಕ್ಕಳ ಗ್ರಾಮ ಸಭೆಯನ್ನು ಗುಡೇಕೋಟೆ ಪಿಎಸ್‌ಐ ಜಿ.ಸುಬ್ರಹ್ಮಣ್ಯಂ ಉದ್ಘಾಟಿಸಿದರು. ಗ್ರಾಪಂ ಅಧ್ಯಕ್ಷ ಕೆ.ಕೃಷ್ಣ, ಪಿಡಿಒ ಬಸಮ್ಮ, ಪ್ರಾಚಾರ್ಯ ಗಿರೀಶ್, ಉಪಪ್ರಾಚಾರ್ಯೆ ರುಕ್ಮಿಣಿ ಬಾಯಿ, ಆಶಾ ಕಾರ್ಯಕರ್ತೆ ಶೈಲಜಾ ಇತರರಿದ್ದರು. 
ಜಿಲ್ಲೆ

ಅನ್ಯಾಯಕ್ಕೊಳಗಾದಾಗ ಧ್ವನಿ ಎತ್ತಿ

ಗಾಯತ್ರಿ ಮಾಲಿಪಾಟೀಲ್

ಕೂಡ್ಲಿಗಿ: ಮಕ್ಕಳು ಸಮಾಜದ ಆಸ್ತಿಯಾಗಲು ಅದಕ್ಕೆ ಪೂರಕ ವಾತಾವರಣ ಅಗತ್ಯ ಎಂದು ಗ್ರಾಪಂ ಅಧ್ಯಕ್ಷ ಕೆ.ಕೃಷ್ಣ ಹೇಳಿದರು.

ಗುಡೇಕೋಟೆ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಗ್ರಾಪಂ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಮಕ್ಕಳ ಗ್ರಾಮ ಸಭೆಯಲ್ಲಿ ಮಾತನಾಡಿದರು. ಮಕ್ಕಳಿಗಾಗಿ ಆಸ್ತಿ ಮಾಡಬೇಡಿ, ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ ಎಂಬುದು ಇತ್ತೀಚಿನ ಪರಿಕಲ್ಪನೆ. ಸಮಾಜದ ಎಲ್ಲ ಸ್ತರಗಳಲ್ಲಿ ಮಕ್ಕಳಿಗೆ ಶೋಷಣೆ ಆಗುತ್ತಿರುವುದನ್ನು ಗಮನಿಸುತ್ತಿದ್ದೇವೆ. ಮಕ್ಕಳ ಮೇಲಿನ ಅತ್ಯಾಚಾರ, ದೌರ್ಜನ್ಯ, ಅಪಹರಣ, ಕಸದ ತೊಟ್ಟಿಯಲ್ಲಿ ಹಸುಗೂಸು ಪತ್ತೆ ಹೀಗೆ ಮಕ್ಕಳ ಕೇಂದ್ರೀಕೃತವಾದ ಅನೇಕ ಸುದ್ದಿ ಕೇಳುತ್ತೇವೆ. ಮಕ್ಕಳು ನಿರಂತರ ಶೋಷಣೆಗೆ ಒಳಗಾಗುತ್ತಿರುವಾಗ ಅವರ ರಕ್ಷಣೆ ಮಾಡುವವರು ಯಾರು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಯಾರಿಗೆ ತೊಂದರೆಯಾಗಿದೆಯೋ ಅವರೇ ಧ್ವನಿ ಎತ್ತಬೇಕು ಎಂದು ತಿಳಿಸಿದರು.

ಗುಡೇಕೋಟೆ ಪಿಎಸ್‌ಐ ಜಿ.ಸುಬ್ರಹ್ಮಣ್ಯಂ ಮಾತನಾಡಿ, ಮಕ್ಕಳು ಹಕ್ಕುಗಳನ್ನು ಅನುಭವಿಸಲು ಹಾಗೂ ಆ ಹಕ್ಕುಗಳಿಗೆ ಚ್ಯುತಿ ಬಂದಾಗ ರಕ್ಷಣೆ ಮಾಡಿಕೊಳ್ಳಲು, ಬೇಕು-ಬೇಡಗಳನ್ನು ಸಮಾಜದ ಮುಂದೆ ನಿರ್ಭಯವಾಗಿ ಹೇಳಿಕೊಳ್ಳಲು ಮಕ್ಕಳ ವಿಶೇಷ ಗ್ರಾಮಸಭೆ ಆಯೋಜಿಸಲಾಗಿದೆ. ಮಕ್ಕಳಿಂದ ದೂರುಗಳು ಬಂದಲ್ಲಿ ಕಾನೂನು ರಕ್ಷಣೆ ಜತೆ ತಪ್ಪಿತಸ್ಥರಿಗೆ ಸೂಕ್ತ ಕ್ರಮ ವಹಿಸಲಾಗುತ್ತದೆ ಎಂದು ತಿಳಿಸಿದರು.

ಪಿಡಿಒ ಬಸಮ್ಮ, ಪ್ರಾಚಾರ್ಯ ಗಿರೀಶ್, ಉಪಪ್ರಾಚಾರ್ಯೆ ರುಕ್ಮಿಣಿ ಬಾಯಿ, ಆಶಾ ಕಾರ್ಯಕರ್ತೆ ಶೈಲಜಾ, ಆರೋಗ್ಯ ಇಲಾಖೆ ಹಿರಿಯ ನಿರೀಕ್ಷಣಾಧಿಕಾರಿಗಳಾದ ಮಂಜುಳಾ, ಅಬ್ದುಲ್ ವಹಾಬ್, ಸ್ತ್ರೀ-ಶಕ್ತಿ ಸಂಘದ ತುಳುಸಮ್ಮ, ಗ್ರಾಪಂ ಸದಸ್ಯರು ಇದ್ದರು.