ಕಾರವಾರ: ತಾಲೂಕಿನಲ್ಲಿ ಪ್ರಸಿದ್ಧವಾಗಿರುವ ಕಡವಾಡ ತರಕಾರಿ ಗಿಡಗಳು ಮಳೆ ಇಲ್ಲದೇ ಒಣಗಿವೆ.
ಪ್ರತಿ ವರ್ಷ ಅಕ್ಟೋಬರ್‌ವರೆಗೂ ಹೀರೆ, ಸವತೆ, ಬೆಂಡೆ, ಹಾಗಲ, ಅಂಗಿಕಸೆ ಮುಂತಾದ ತರಕಾರಿಗಳನ್ನು ರೈತರು ಬೆಳೆದು ಮಾರಾಟ ಮಾಡುತ್ತಿದ್ದರು.
ಆದರೆ, ಈ ಬಾರಿ ಆಗಸ್ಟ್ ಅಂತ್ಯಕ್ಕೇ ನೀರಿಲ್ಲದೇ ಗಿಡಗಳು ಸತ್ತಿದ್ದು, ಬಿಟ್ಟ ಕಾಯಿಗಳು ಒಳಗಿ ಹೋಗಿವೆ.
ಕಡವಾಡ ಹಾಗೂ ಶಿರವಾಡ ಗ್ರಾಪಂ ವ್ಯಾಪ್ತಿಯಲ್ಲಿ ಸಣ್ಣ, ಸಣ್ಣ ಪ್ಲಾಟ್‌ಗಳಲ್ಲಿ ಸುಮಾರು 4 ಹೆಕ್ಟೇರ್ ಪ್ರದೇಶದಲ್ಲಿ 30 ಕ್ಕೂ ಅಧಿಕ ರೈತರು ಸಂಪೂರ್ಣ ಸಾವಯವ ರೀತಿಯಲ್ಲಿ ಬೆಳೆಯುವ ಕಡವಾಡ ತರಕಾರಿಗೆ ಕಾರವಾರ ಮಾರುಕಟ್ಟೆಯಲ್ಲಿ ಸಾಕಷ್ಟು ಬೇಡಿಕೆ ಇದೆ.
ರೈತರು ಮಾರುಕಟ್ಟೆಗೆ ತಂದು ಮಾರುವ ಜತೆಗೆ, ರೈತ ಮಹಿಳೆಯರು ರಸ್ತೆ ಬದಿಯಲ್ಲಿ ತರಕಾರಿಗಳನ್ನು ಇಟ್ಟುಕೊಂಡು ಮಾರುತ್ತಾರೆ.
ಈ ಬಾರಿ ಜೂನ್‌ನಲ್ಲಿ ಮಳೆ ಇಲ್ಲದ ಕಾರಣ ತರಕಾರಿ ಹಾಕಲು ವಿಳಂಬವಾಯಿತು.
ಜುಲೈನಲ್ಲಿ ಇದ್ದಕ್ಕಿದ್ದಂತೆ ಭಾರಿ ಮಳೆಯಾಗಿ ಬಿಟ್ಟ ಹೂವುಗಳು ಕೊಳೆತವು. ಆಗಸ್ಟ್ ಬಂದ ನಂತರ ಮತ್ತೆ ಮಳೆಯಾಗದೇ ಗಿಡಗಳು ಒಣಗಿ ಹೋದವು ಎನ್ನುತ್ತಾರೆ ಕಡವಾಡದ ರೈತೆ ಮೀರಾ ಗುನಗಿ.
ಪರಿಹಾರವೂ ಸಿಗದು:
ಸರ್ಕಾರದ ಮಾನದಂಡAತೆ ಕನಿಷ್ಠ 1 ಎಕರೆ ಪ್ರದೇಶದಲ್ಲಿ ಬೆಳೆಯುವ ಪ್ರಮುಖ ಬೆಳೆಯನ್ನು ಬರ ಸಮೀಕ್ಷೆಗೆ ಪರಿಗಣಿಸಬೇಕು ಎಂದಿದೆ.
ಕಡವಾಡದಲ್ಲಿ 5 ರಿಂದ ಗರಿಷ್ಠ 20 ಗುಂಟೆಗಳಲ್ಲಿ ಮಾತ್ರ ಈ ಬೆಳೆ ಬೆಳೆಯಲಾಗುತ್ತದೆ.
ಇದರಿಂದ ಬರ ಸಮೀಕ್ಷೆಗೆ ತರಕಾರಿಯನ್ನು ಪರಿಗಣಿಸಿಲ್ಲ. ಮಾತ್ರವಲ್ಲ ಶಿರವಾಡ ಕಡವಾಡ ತಾಲೂಕುಗಳು ಬೆಳೆ ವಿಮೆ ವ್ಯಾಪ್ತಿಗೂ ಒಳಪಟ್ಟಿಲ್ಲ.
ಇದನ್ನೂ ಓದಿ: ಗೃಹ ಲಕ್ಷ್ಮೀ ಹಣ ಬರದಿದ್ರೆ ಏನು ಮಾಡಬೇಕು ಇಲ್ನೋಡಿ
ಮುಖ್ಯವಾಗಿ ತರಕಾರಿಗಳಿಗೆ ಉತ್ತರ ಕನ್ನಡದ ಯಾವುದೇ ಪ್ರದೇಶದಲ್ಲಿ ಬೆಳೆ ವಿಮೆ ಸೌಲಭ್ಯವೂ ಇಲ್ಲ. ಕೆಲವರು ಅತಿಕ್ರಮಣ ಜಾಗದಲ್ಲಿ ಇನ್ನು ಕೆಲವರು ಗೇಣಿ ಪಡೆದು ಬೆಳೆ ಬೆಳೆಯುವುದರಿಂದ ನಿಜವಾದ ರೈತರಿಗೆ ಸೌಲಭ್ಯ ಕೊಡುವುದು ಕಷ್ಟವಾಗುತ್ತದೆ. ಇನ್ನು ಹಲವರ ಜಮೀನು ಜಂಟಿ ಖಾತೆಯಲ್ಲಿರುವುದೂ ಸರ್ಕಾರಿ ಸೌಲಭ್ಯ ನೀಡಲು ಸಮಸ್ಯೆ ಎಂಬುದು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಸುನೀಲ ಅಂಕೋಲೆಕರ್ ಅವರ ಅಭಿಪ್ರಾಯ.
ಪ್ರತಿ ವರ್ಷ ನಾವು ಕನಿಷ್ಠ 40 ರಿಂದ 50 ದಿನ ತರಕಾರಿ ಕೊಯ್ಲು ಮಾಡುತ್ತಿದ್ದೆವು. ಎಲ್ಲ ಖರ್ಚು ತೆಗೆದರೂ ನಮಗೆ ಸುಮಾರು 30 ಸಾವಿರ ರೂ. ಉಳಿತಾಯವಾಗುತ್ತಿತ್ತು. ಇದೇ ನಮ್ಮ ಜೀವನಕ್ಕೆ ಆದಾಯ. ಆದರೆ, ಈ ಬಾರಿ ಸರಿಯಾಗಿ 15 ದಿನ ಕೊಯ್ಲು ಮಾಡಲು ಸಾಧ್ಯವಾಗಿಲ್ಲ. ಗಳಿಕೆ 10 ಸಾವಿರ ದಾಟಿಲ್ಲ.ಮೀರಾ ಗುನಗಿಕಡವಾಡದ ತರಕಾರಿ ಬೆಳೆಯುವ ರೈತೆ