ವಿಜಯವಾಣಿ ಸುದ್ದಿಜಾಲ ಕಡಬ
ಕಡಬ ತಾಲೂಕಿನಾದ್ಯಾಂತ ಬುಧವಾರ ಸಂಜೆ ಸುರಿದ ಗಾಳಿ ಸಹಿತ ಧಾರಾಕಾರ ಮಳೆಗೆ ಹಲವೆಡೆ ಅವಾಂತರ ಸೃಷ್ಟಿಯಾಗಿದೆ.
ಕಡಬ ಪಪಂ ವ್ಯಾಪ್ತಿಯ ಕಳಾರ ಎಂಬಲ್ಲಿ ಜೈನಾಬಿ ಎಂಬುವವರ ಮನೆಯೊಳಗೆ ಪಕ್ಕದ ತೋಡಿನ ನೀರು ಮನೆಯೊಳಗೆ ನುಗ್ಗಿ ಮಣ್ಣಿನ ಗೋಡೆ ಬಿರುಕು ಬಿಟ್ಟು ಆತಂಕ ಸೃಷ್ಟಿಯಾಗಿದೆ. ಮನೆ ಮಂದಿ ರಾತ್ರಿ ಬೇರೆ ಮನೆಗೆ ಸ್ಥಳಾಂತರಗೊಂಡಿದ್ದಾರೆ.
ಕಡಬ ಮುಖ್ಯ ಪೇಟೆಯ ಚರಂಡಿಗಳಲ್ಲಿ ಸಮರ್ಪಕವಾಗಿ ಮಳೆ ನೀರು ಹರಿದು ಹೋಗದ ಕಾರಣ ಅಂಗಡಿ, ಮನೆಗಳಿಗೆ ನೀರು ನುಗ್ಗಿದೆ. ಕಾಲೇಜು ರಸ್ತೆಯ ಅಡ್ಡಗದ್ದೆಯಲ್ಲಿ ಮಳೆ ನೀರು ರಸ್ತೆಯಲ್ಲಿ ಹರಿದು ವಾಹನ ಸವಾರರು ಪರದಾಡಿದರು. ಕಡಬ ಸಮೂದಾಯ ಆಸ್ಪತ್ರೆ ಬಳಿಯ ಮನೆಯೊಂದಕ್ಕೆ ಚರಂಡಿ ನೀರು ನುಗ್ಗಿದೆ. ಪಪಂ ವ್ಯಾಪ್ತಿಯ ಪೇಟೆಗಳಲ್ಲಿನ ಚರಂಡಿಗಳ ಸಮರ್ಪಕ ನಿರ್ವಹಣೆಯಿಲ್ಲದೆ ಮಳೆಗಾಲದಲ್ಲಿ ಕೃತಕ ನೆರೆ ಸೃಷ್ಟಿಯಾಗುತ್ತಿದೆ ಎನ್ನುವ ಆರೋಪ ವ್ಯಕ್ತವಾಗಿದೆ.
ಸವಣೂರು, ಆಲಂಕಾರು, ಕಾಣಿಯೂರು, ಕೊಲ, ರಾಮಕುಂಜ, ಪೆರಾಬೆ, ಕುಂತೂರು ಮೊದಲಾದ ಗ್ರಾಮೀಣ ಭಾಗದಲ್ಲಿ ಭಾರಿ ಮಳೆಯಾಗಿದೆ.
ಬಲ್ಯ ಗ್ರಾಮದಲ್ಲಿ ಭಾರಿ ಮಳೆಯಿಂದ ಹಳ್ಳ, ತೋಡು, ನೆರೆ ನೀರು ಪಕ್ಕದ ಕೃಷಿ ತೋಟಗಳಿಗೆ ನುಗ್ಗಿ ಅಡಕೆ, ತೆಂಗಿನ ಕಾಯಿ, ತೋಟಗಳಿಗೆ ಹಾಕಿದ ಗೊಬ್ಬರ ನೀರು ಪಾಲಾಗಿದೆ. ಪೆರಾಬೆ ಗ್ರಾಮದ ಪೂಂಜ ಎಂಬಲ್ಲಿ ಪೂವರು, ಪುಷ್ಪಾ, ಗುಲಾಬಿ, ಸುಶೀಲಾ ಎಂಬುವವರ ಆಶ್ರಯ ಮನೆಗಳಿಗೆ ಪಕ್ಕದ ತೋಡಿನ ನೀರು ನುಗ್ಗಿ ಹಾನಿಯಾಗಿದೆ. ಮನೆಯಲ್ಲಿದ್ದ ವಸ್ತುಗಳೆಲ್ಲ ನೀರು ಪಾಲಾಗಿದೆ.
ಕಡಬ-ಪಂಜ ಸಂಪರ್ಕ ರಸ್ತೆಯ ಕೋಡಿಂಬಾಳ ಪೇಟೆ ಸಮೀಪವಿರುವ ಸೇತುವೆ ಮೇಲೆ ಮಳೆ ನೀರು ನಿಂತು ವಾಹನ ಸವಾರರಿಗೆ ಸಂಚಾರಕ್ಕೆ ಕಂಟಕವಾಯಿತು. ಈ ಸೇತುವೆಯ ಎರಡು ಕಡೆಗಳಲ್ಲಿರುವ ಸಂಪರ್ಕ ರಸ್ತೆ ಏರು ರಸ್ತೆಯಾಗಿದೆ. ಹಾಗಾಗಿ ಮಳೆ ನೀರು ನೇರವಾಗಿ ಸೇತುವೆ ಕಡೆ ಹರಿದು ಸೇತುವೆ ಮೇಲೆ ಸಂಗ್ರಹವಾಗುತ್ತದೆ. ನೀರು ಹರಿದು ಹೋಗಲು ಸಮರ್ಪಕ ವ್ಯವಸ್ಥೆ ಕಲ್ಪಿಸಿದರೆ ಸಮಸ್ಯೆ ಮರಕಳಿಸದು ಎನ್ನುತಾರೆ ಸ್ಥಳೀಯರು.