ಬೈಂದೂರು ವ್ಯಾಪ್ತಿಯಲ್ಲಿ ನಿರಂತರ ಮಳೆಯಿಂದ ಕೃಷಿ ಭೂಮಿ ಸಂಪೂರ್ಣ ಜಲಾವೃತಗೊಂಡಿರುವುದು. 
ಜಿಲ್ಲೆ

ನಿರಂತರ ಮಳೆಗೆ ಬೈಂದೂರು ತಾಲೂಕಿನಲ್ಲಿ ಜನಜೀವನ ಅಸ್ತವ್ಯಸ್ತ; ಮಕ್ಕಳ ಸುರಕ್ಷತೆಗೆ ಆದ್ಯತೆ: ಡಿಡಿಪಿಐ ಕೆ.ಗಣಪತಿ ಸೂಚನೆ

Vinod Kumar

ಬೈಂದೂರು: ತಾಲೂಕು ವ್ಯಾಪ್ತಿಯಲ್ಲಿ ನಿರಂತರ ಮಳೆಯಿಂದ ಜನಜೀವನ ಜರ್ಜರಿತಗೊಂಡಿದೆ. ಮಳೆ ಅಬ್ಬರಕ್ಕೆ ರೈತರು ಕಂಗಾಲಾಗಿದ್ದು, ಹೆಚ್ಚಿನ ಕಡೆಗಳಲ್ಲಿ ಕೃಷಿ ಭೂಮಿ ಭಾಗಶ ಜಲಾವೃತಗೊಂಡಿದೆ.

ನೆರೆ ನೀರಿಗೆ ಕೃಷಿ ಭೂಮಿ ಜಲಾವೃತ

ಬೈಂದೂರು ತಾಲೂಕಿನ ತಗ್ಗರ್ಸೆ ಗ್ರಾಮದ ಕೆಲವು ಭಾಗದಲ್ಲಿ ನೆರೆ ನೀರಿಗೆ ಕೃಷಿ ಭೂಮಿ ಜಲಾವೃತಗೊಂಡಿದ್ದು, ತಗ್ಗರ್ಸೆ ಮರ್ಲ್ಹಿತ್ತಲು ರಸ್ತೆ ಮಕ್ಕಿಗದ್ದೆಯಲ್ಲಿ ನೀರು ನುಗ್ಗಿದೆ. ಈ ಭಾಗದವರ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ಯಡ್ತರೆ ಗ್ರಾಮದ ಅತ್ತಿಕೇರಿ ಕಿರು ಸೇತುವೆ ನೀರಿನಲ್ಲಿ ಕೊಚ್ಚಿಕೊಂಡು ಹೋಗುವ ಸ್ಥಿತಿಯಲ್ಲಿದೆ.

ಮರ ಬಿದ್ದು ಮುರಿದ ವಿದ್ಯುತ್ ಕಂಬಗಳು

ಶಿರೂರು, ಕರಾವಳಿ, ದೊಂಬೆ ಮುಂತಾದ ಸ್ಥಳಗಳಲ್ಲಿ ಕೃಷಿ ಭೂಮಿಗೆ ಹಾನಿಯಾಗಿದೆ. ಯಡ್ತರೆ ಗ್ರಾಮದ ಊದೂರು ಸಮೀಪ ಬಾರಿ ಗಾತ್ರದ ಮರ ಬಿದ್ದು ಎರಡು ವಿದ್ಯುತ್ ಕಂಬ ತುಂಡಾಗಿ ಮೆಸ್ಕಾಂ ಇಲಾಖೆಗೆ ನಷ್ಟ ಉಂಟಾಗಿದೆ. ಹೊಸೂರು, ತೂದಳ್ಳಿ, ಆಲಂದೂರು, ಕಡ್ಕೆ, ಗಂಗನಾಡು, ಅತ್ಯಾಡಿ ಮುಂತಾದ ಗ್ರಾಮೀಣ ಭಾಗಗಳಲ್ಲಿಯೂ ನೆರೆಯಿಂದ ಕೃಷಿ ಭೂಮಿ ಜಲಾವೃತಗೊಂಡಿದೆ. ಬಾರಿ ಮಳೆ ಹಿನ್ನೆಲೆಯಲ್ಲಿ ಬೈಂದೂರು ತಾಲೂಕಿನ 44 ಶಾಲೆಗಳಿಗೆ ಸೋಮವಾರ ರಜೆ ಘೋಷಿಸಲಾಗಿದೆ.

ಸೂಕ್ತ ಮುನ್ನೆಚ್ಚರಿಕೆ ವಹಿಸಲು ಜಿಲ್ಲಾಡಳಿತ ಸೂಚನೆ

ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಶಾಲೆಗೆ ಬರಲು ಕಷ್ಟವಾಗುವ ಕಡೆಗಳಲ್ಲಿ ರಜೆ ಘೋಷಣೆಗೂ ಸೂಚನೆ ನೀಡಲಾಗಿದೆ. ಆಯಾ ಶಾಲೆ ಮುಖ್ಯಶಿಕ್ಷಕ ಹಾಗೂ ಪಾಲಕರು ನಿರ್ಧಾರ ತೆಗೆದುಕೊಳ್ಳುವುದು ಮತ್ತು ಮಕ್ಕಳ ಸುರಕ್ಷತೆ ಬಗ್ಗೆ ಹಚ್ಚಿನ ಆದ್ಯತೆ ನೀಡಲು ನಿರ್ದೇಶನ ಕೊಡಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಡಿಡಿಪಿಐ ಕೆ.ಗಣಪತಿ ತಿಳಿಸಿದ್ದಾರೆ. ಜಿಲ್ಲಾಡಳಿತ ಮಳೆ ಅಪಾಯದ ಕುರಿತು ಇಲಾಖೆಗೆ ಸೂಕ್ತ ಮುನ್ನೆಚ್ಚರಿಕೆ ವಹಿಸಿ ತಕ್ಷಣ ಸ್ಪಂದಿಸಲು ತಿಳಿಸಿದೆ.