ವಿಜಯವಾಣಿ ಸುದ್ದಿಜಾಲ ಗುರುಪುರ
ರಾಷ್ಟ್ರೀಯ ಹೆದ್ದಾರಿ 169ರ ವಿಸ್ತರಣೆ ಕಾಮಗಾರಿ ನಡೆಯುತ್ತಿರುವ ಗುರುಪುರ ಪಂಚಾಯಿತಿ ವ್ಯಾಪ್ತಿಯ ಅಡ್ಡೂರು ಗ್ರಾಮದ ನೂಯಿಯಲ್ಲಿ ಸುಮಾರು 20 ಅಡಿ ಎತ್ತರಕ್ಕೆ ಹಾಕಲಾದ ಹೆದ್ದಾರಿ ಮಣ್ಣು ಕುಸಿದು ಒಂದೂವರೆ ಎಕರೆ ಪ್ರದೇಶದಲ್ಲಿರುವ ಅಡಕೆ ತೋಟ ನಾಶವಾಗಿದ್ದು, ಕೃಷಿಕ ಕಂಗಾಲಾಗಿದ್ದಾರೆ.
ರವಿಶಂಕರ್ ರಾವ್ ನೂಯಿ ಅವರಿಗೆ ಸೇರಿದ ಅಡಕೆ ತೋಟ ಲೀಸ್‌ಗೆ ಪಡೆದುಕೊಂಡ ತುಕಾರಾಮ ಪೂಜಾರಿ ಎಂಬುವರು ತೋಟದಲ್ಲಿ ಅಡಕೆ, ಬಾಳೆ, ಕರಿಮೆಣಸು ಮತ್ತು ತೆಂಗಿನ ಕೃಷಿ ಮಾಡಿದ್ದಾರೆ. ಲಾಭದಾಯಕ ಫಸಲಿನ ಆಸೆಯಿಂದ ಈ ವರ್ಷ ತೋಟಕ್ಕೆ ಲಕ್ಷಾಂತರ ರೂ. ಗೊಬ್ಬರ ಸುರಿದಿದ್ದಾರೆ. ಮೊನ್ನೆಯಿಂದ ಸುರಿಯುತ್ತಿರುವ ಮುಸಲಧಾರೆಗೆ ಪಕ್ಕದ ಹೆದ್ದಾರಿ ಮಣ್ಣು ಕುಸಿದು, ಕೆಸರು ನೀರು ಹರಿದು ಒಟ್ಟು 6 ಎಕರೆ ಜಾಗದ ತೋಟದಲ್ಲಿ ಸುಮಾರು ಒಂದೂವರೆ ಎಕರೆ ಜಾಗದಲ್ಲಿರುವ ಅಡಕೆ ತೋಟದ 20ಕ್ಕೂ ಹೆಚ್ಚು ಮರಗಳು ಉರುಳಿವೆ ಅಥವಾ ಉಳಿದ ಮರಗಳು ಉಸಿರುಗಟ್ಟಿ ನಿಂತಿವೆ. ತೋಟದ ತುಂಬೆಲ್ಲ ಕೆಸರು ನೀರು, ಮಣ್ಣು ಜಮೆ ಆಗಿದ್ದು ಲಕ್ಷಾಂತರ ರೂ ನಷ್ಟವಾಗಿದೆ.
ಹೆದ್ದಾರಿ ಬಿರುಕಿಗೆ ತೇಪೆ
ಅಡ್ಡೂರು-ನೂಯಿ ಭಾಗದಲ್ಲಿ ಡಾಂಬರು ಅಳವಡಿಸಲಾದ ಹೆದ್ದಾರಿ ಬದಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಬಿರುಕು ಬಿಟ್ಟು, ಮನೆಗೆ ಅಪಾಯ ಉಂಟಾಗಿದೆ. ಈ ಬಗ್ಗೆ ‘ವಿಜಯವಾಣಿ’ ವರದಿ ಮಾಡಿತ್ತು. ಸ್ಥಳಕ್ಕಾಗಮಿಸಿ ಪರಿಶೀಲಿಸಿದ ಮಂಗಳೂರು ತಹಸೀಲ್ದಾರ್ ಪ್ರಶಾಂತ್ ಪಾಟೀಲ್ ಅವರು ನೀಡಿದ ನಿರ್ದೇಶನದಂತೆ ಗುತ್ತಿಗೆ ಕಂಪೆನಿ ಡಿಬಿಎಲ್ ಸೋಮವಾರವೇ ಬಿರುಕು ಬಿಟ್ಟ ಕಡೆಯಲ್ಲಿ ಜಲ್ಲಿ ತುಂಬಿಸಿ ತೇಪೆ ಹಾಕಿದೆ. ಹೆದ್ದಾರಿ ಉದ್ದಕ್ಕೂ ತಡೆಗೋಡೆ ನಿರ್ಮಿಸಿದಲ್ಲಿ ಮಣ್ಣು ಕುಸಿತ ತಡೆ ಸಾಧ್ಯ ಎಂದು ಸ್ಥಳೀಯರು ಹೇಳಿದ್ದಾರೆ.
ತೋಟದ ಬದಿಯಲ್ಲಿ ಅವೈಜ್ಞಾನಿಕ ಕಾಮಗಾರಿ ನಡೆದಿದೆ. ಅನಗತ್ಯವಾಗಿ ಮೋರಿ ಅಳವಡಿಸಲಾಗಿದೆ. ಅದರಿಂದ ನಮ್ಮ ಅಡಕೆ ತೋಟಕ್ಕೆ ಹೆದ್ದಾರಿ ಮಣ್ಣು ಜರಿದು ಲಕ್ಷಾಂತರ ರೂ. ನಷ್ಟವಾಗಿದೆ. ತೋಟಕ್ಕೆ ಹಾಕಲಾದ 3 ಲಕ್ಷ ರೂ. ಮೌಲ್ಯದ ಗೊಬ್ಬರ ಕೊಚ್ಚಿ ಹೋಗಿದೆ. ಹಲವು ಅಡಕೆ ಮರಗಳು ಸತ್ತಿದ್ದರೆ, ಆಳೆತ್ತರಕ್ಕೆ ಕೆಸರು ಮಣ್ಣು ಜಮೆ ಆಗಿದ್ದು ಉಳಿದ ಮರಗಳಿಗೂ ಹಾನಿಯಾಗಿದೆ. ನಮಗಾದ ನಷ್ಟ ಎನ್‌ಎಚ್ ಕೊಡುತ್ತದೆಯೇ? ಅಥವಾ ಕಂದಾಯ ಇಲಾಖೆ ಪರಿಹಾರ ನೀಡುತ್ತದೆಯೇ?. ತುಕಾರಾಮ ಪೂಜಾರಿ ಅಭಿವೃದ್ಧಿ ಎಂದು ಹೇಳಿ ಬಡ ಕೃಷಿಕರಿಗೆ ತೊಂದರೆ ಕೊಡುವುದು ಸರಿಯಲ್ಲ. ಗ್ರಾಮಸ್ಥರ ಮಾತು ದಿಕ್ಕರಿಸಿ ಮನಬಂದಂತೆ ಕಾಮಗಾರಿ ನಡೆಸಲಾಗಿದೆ. ಪರಿಣಾಮ ಈಗ ಬೆಳಕಿಗೆ ಬಂದಿದೆ. ನಷ್ಟ ಅನುಭವಿಸಿದ ಕೃಷಿಕರಿಗೆ ಪರಿಹಾರ ನೀಡಬೇಕು. ನೂಯಿಯಲ್ಲಿ ಹೆದ್ದಾರಿ ಕಾಮಗಾರಿಯಿಂದ ಸುಮಾರು 12 ಎಕರೆ ಕಂಗು, ತೆಂಗು, ಬಾಳೆ, ಕರಿಮೆಣಸು, ಭತ್ತದ ಕೃಷಿಗೆ ತೊಂದರೆ ಎದುರಾಗಿದೆ. ಹೆದ್ದಾರಿ ಮಣ್ಣು ಕುಸಿತ ತಡೆಯಲು ತಡೆಗೋಡೆಯೊಂದೇ ಪರಿಹಾರ. ಹರೀಶ್ ಬಳ್ಳಿ ಸದಸ್ಯ, ಗುರುಪುರ ಪಂಚಾಯಿತಿ ಸ್ಥಳೀಯ ನೂಯಿ ವಾರ್ಡ್ 4