ಅರಿಯಡ್ಕದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಂಟರಗಾಳಿಯಿಂದಾಗಿ ಮರ ಬಿದ್ದು ಮನೆಗೆ ಹಾನಿಯಾಗಿರುವುದು. 
ಜಿಲ್ಲೆ

ಅರಿಯಡ್ಕದಲ್ಲಿ ಸುಂಟರಗಾಳಿ ಅವಾಂತರ : 2 ಮನೆ ನಾಶ : ಹಲವು ನಿವಾಸಗಳಿಗೆ ಹಾನಿ

ಸೌಮ್ಯ ಆರ್

ಪುತ್ತೂರು ಗ್ರಾಮಾಂತರ: ಅರಿಯಡ್ಕ ಗ್ರಾಪಂ ವ್ಯಾಪ್ತಿಯಲ್ಲಿ ಸುಂಟರಗಾಳಿ ಬೀಸಿ ಹಲವೆಡೆ ಮನೆಗಳಿಗೆ ಹಾನಿಯಾದ ಘಟನೆ ಭಾನುವಾರ ಮಧ್ಯಾಹ್ನ ಸಂಭವಿಸಿದೆ. ಈ ಭಾಗದಲ್ಲಿ ಹಲವಾರು ಮರಗಳು ಧರಾಶಾಯಿಯಾಗಿವೆ.

ಅರಿಯಡ್ಕ ಗ್ರಾಮದ ಕೌಡಿಚ್ಚಾರು ಸಿಆರ್‌ಸಿ ಕಾಲನಿಯಲ್ಲಿ ಮರವೊಂದು ಉರುಳಿಬಿದ್ದು ರಬ್ಬರ್ ನಿಗಮಕ್ಕೆ ಸೇರಿದ ಕಟ್ಟಡದ ಎರಡು ಮನೆಗಳಿಗೆ ಹೆಚ್ಚಿನ ಹಾನಿ ಸಂಭವಿಸಿದೆ. ಅಮರಾವತಿ ಮತ್ತು ತಂಗರಾಜ್ ಎಂಬುವರ ಮನೆ ಮೇಲೆ ಬೃಹತ್ ಮರ ಉರುಳಿ ಬಿದ್ದಿದ್ದು, ಘಟನೆಯಿಂದಾಗಿ ಈ ಎರಡು ಕುಟುಂಬಗಳಿಗೆ ಮನೆ ಇಲ್ಲದಾಗಿದೆ. ಪವಾಡ ಸದೃಶವಾಗಿ ಮನೆಯವರು ಗಾಯಗಳಾಗದೆ ಪಾರಾಗಿದ್ದಾರೆ.

ಕೌಡಿಚ್ಚಾರು ಸಿಆರ್‌ಸಿ ಕಾಲನಿಯ ನಾಗಮ್ಮ ಎಂಬುವರ ಮನೆಯ ಮಾಡಿನ ಮೇಲೆ ಮರ ಉರುಳಿಬಿದ್ದು ಮಾಡಿಗೆ ಹಾನಿಯಾಗಿದೆ. ಪೇಚಾಯಿ, ಸಿಂದಿಲ್‌ಕುಮಾರ್ ಎಂಬುವರ ಮನೆಯ ಮಾಡಿನ ಶೀಟು ಹಾರಿಹೋಗಿ ಹಾನಿಗೊಂಡಿದೆ. ರವಿರಾಜ್ ಎಂಬುವರ ಆಡಿನ ಕೊಟ್ಟಿಗೆ ಶೀಟುಗಳು ಹಾರಿಹೋಗಿದೆ. ಕಾಲನಿಯ ಹಲವು ಮನೆಗಳಿಗೆ ಸಣ್ಣ ಪ್ರಮಾಣದ ಹಾನಿಯಾಗಿದೆ.

ಅರಿಯಡ್ಕ ಗ್ರಾಪಂ ಅಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿ, ಸದಸ್ಯರಾದ ಸೌಮ್ಯ ಸುಬ್ರಹ್ಮಣ್ಯ, ನಾರಾಯಣ ನಾಯ್ಕ ಚಾಕೋಟೆ, ಭಾರತಿ ವಸಂತ್ ಕೌಡಿಚ್ಚಾರು, ಪಾಣಾಜೆ ವಲಯ ಅರಣ್ಯಾಧಿಕಾರಿ ಮತ್ತಿತರರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿದ್ಯುತ್ ಲೈನ್ ಅಸ್ತವ್ಯಸ್ತ

ಕಾವು ಸಬ್‌ಸ್ಟೇಷನ್ ಸಂಪರ್ಕಿಸುವ ವಿದ್ಯುತ್ ಲೈನಿನ ಮೇಲೆ ಕೌಡಿಚ್ಚಾರು ಸೇತುವೆಯ ಸಮೀಪ ಮರ ಉರುಳಿ ಬಿದ್ದು, ವಿದ್ಯುತ್ ಸರಬರಾಜು ವ್ಯವಸ್ಥೆಗೆ ಹಾನಿಯಾಗಿದೆ. ಮಾಡ್ನೂರು ಗ್ರಾಮದ ಬೆರ್ನಂತಿ ಎಂಬಲ್ಲಿ ಉಮೇಶ್ ಎಂಬುವರ ಕೊಟ್ಟಿಗೆಯ ಮೇಲೆ ಮರ ಉರುಳಿಬಿದ್ದು ಕೊಟ್ಟಿಗೆಗೆ ಹಾನಿಯಾಗಿದೆ. ಅಲ್ಲದೆ ಬೆರ್ನಂತಿ ವ್ಯಾಪ್ತಿಯಲ್ಲಿ ಹಲವಾರು ಮರಗಳು ಉರುಳಿ ಬಿದ್ದಿವೆ.