ಕುಂದಾಪುರ: ಕಳೆದ ಮೂರ‌್ನಾಲ್ಕು ದಿನಗಳಿಂದ ತಾಲೂಕಿನಾದ್ಯಂತ ವ್ಯಾಪಕ ಮಳೆಯಾಗುತ್ತಿದ್ದು, ಭಾನುವಾರವೂ ಮಳೆಯ ಆರ್ಭಟ ಮುಂದುವರಿದಿದೆ. ಬಹುತೇಕ ತಗ್ಗು ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿದೆ.
ಭಾರಿ ಗಾಳಿ-ಮಳೆಯಿಂದ ಕೃತಕ ನೆರೆ ಹಾವಳಿ ಉಲ್ಭಣಿಸಿದೆ. ಹಲವೆಡೆ ಮನೆಗಳಿಗೆ ನೀರು ನುಗ್ಗಿ ಅಪಾರ ಹಾನಿ ಸಂಭವಿಸಿದೆ. ಕುಂದಾಪುರ ಪುರಸಭೆ ವ್ಯಾಪ್ತಿ, ಗಂಗೊಳ್ಳಿ, ಗುಜ್ಜಾಡಿ ಮತ್ತು ಹೊಸಾಡು ಗ್ರಾಮದ ಅನೇಕ ಕಡೆಗಳ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿ ಆಸ್ತಿಪಾಸ್ತಿಗಳಿಗೆ ಹಾನಿಯಾಗಿದೆ. ಚರಂಡಿಗಳನ್ನು ಸ್ವಚ್ಛ ಮಾಡದ ಹಿನ್ನೆಲೆ ಮಳೆ ನೀರು ರಸ್ತೆಯ ಮೇಲೆ ಹರಿಯಿತು. ಕೆಲವು ಕಡೆ ನೀರು ಹರಿದು ಹೋಗದೆ ರಸ್ತೆಯ ಮೇಲೆ ನಿಂತು ಪಾದಚಾರಿಗಳು ಹಾಗೂ ವಾಹನ ಸವಾರರಿಗೆ ಸಮಸ್ಯೆಯಾಯಿತು.
ಗಾಳಿ-ಮಳೆ ಹೆಚ್ಚಾಗಿರುವುದರಿಂದ ಕಡಲು ಇನ್ನಷ್ಟು ಪ್ರಕ್ಷುಬ್ಧಗೊಂಡಿದ್ದು, ಮರವಂತೆಯಲ್ಲಿ ಕಡಲಿನ ಭಾರಿ ಅಲೆಗಳು ರಾಷ್ಟ್ರೀಯ ಹೆದ್ದಾರಿ 66ರ ತಡೆಗೋಡೆಗೆ ಅಪ್ಪಳಿಸುತ್ತಿದ್ದು, ಸಮುದ್ರ ನೀರು ರಾಷ್ಟ್ರೀಯ ಹೆದ್ದಾರಿಗೆ ಚಿಮ್ಮುತ್ತಿದೆ.
ಗಂಗೊಳ್ಳಿಯ ಬೇಲಿಕೇರಿ, ಖಾರ್ವಿಕೇರಿ, ಗುಜ್ಜಾಡಿ ಗ್ರಾಮದ ಬೆಣ್ಗೆರೆ, ತ್ರಾಸಿ, ಹೊಸಾಡು ಗ್ರಾಮದ ಕಂಚುಗೋಡು ಮತ್ತು ಮರವಂತೆಯಲ್ಲಿ ಕಡಲಬ್ಬರ ಹೆಚ್ಚಾಗಿದ್ದು, ಕಡಲ ತಡಿಯ ಜನರಲ್ಲಿ ಆತಂಕ ಹೆಚ್ಚಿಸಿದೆ. ಮೀನುಗಾರಿಕೆ ಸಂಪೂರ್ಣ ಸ್ಥಗಿತಗೊಂಡಿದ್ದು, ದೋಣಿ ಮತ್ತು ಬೋಟುಗಳು ಬಂದರುಗಳಲ್ಲಿ ಲಂಗರು ಹಾಕಿವೆ.
ಹೆಸ್ಕತ್ತೂರು ಗ್ರಾಮದ ಬಾಬಿ ಕುಲಾಲ್ತಿ ಎಂಬುವರ ಕೊಟ್ಟಿಗೆ ಮೇಲೆ ಮರ ಬಿದ್ದು ಹಾನಿಯಾಗಿದೆ. ಬೀಜಾಡಿ ಗ್ರಾಮದ ಗುಲಾಬಿ ಎಂಬುವರ ಮನೆ ಮೇಲೆ ಅಡಿಕೆ ಮರ ಬಿದ್ದು 15 ಸಾವಿರ ರೂ. ನಷ್ಟ ಸಂಭವಿಸಿದೆ. ಕುಂದಾಪುರ ಪುರಸಭಾ ವ್ಯಾಪ್ತಿಯ ಖಾರ್ವಿ ಕೆಳಕೇರಿ ಗಿರಿಜಾ ಖಾರ್ವಿ ಮತ್ತು ಸಾವಿತ್ರಿ ಖಾರ್ವಿ ಎಂಬುವರ ಮನೆಯ ಹೆಂಚು ಹಾರಿ ಹೋಗಿ 15 ಸಾವಿರ ರೂ.ನಷ್ಟ ಉಂಟಾಗಿದೆ. ಸೇನಾಪುರ ಗ್ರಾಮದ ನಾಗವೇಣಿ ಎಂಬುವರ ಮನೆ ಮೇಲೆ ಮರ ಬಿದ್ದು ಹಾನಿಯಾಗಿದೆ. ಹಾರ್ದಳ್ಳಿ ಮಂಡಳ್ಳಿ ಗ್ರಾಮದ ಅಶ್ವಿನಿ ಎಂಬುವರ ಮನೆ ಮೇಲೆ ಮರ ಬಿದ್ದು ಮನೆ ಭಾಗಶಃ ಹಾನಿಯಾಗಿ 50 ಸಾವಿರ ರೂ. ನಷ್ಟ ಸಂಭವಿಸಿದೆ.