ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ
ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ ಸಭೆ ಶಾಸಕ ಕಿರಣ್‌ಕುಮಾರ್ ಕೊಡ್ಗಿ ಉಪಸ್ಥಿತಿಯಲ್ಲಿ ಸೋಮವಾರ ಕುಂದಾಪುರದಲ್ಲಿ ನಡೆಯಿತು.
ಕೊಂಕಣ ರೈಲ್ವೆ ಮತ್ತು ಕುಂದಾಪುರ ರೈಲು ಸೇವೆಗೆ ಸಂಬಂಧಿತ ವಿಷಯಗಳ ಕುರಿತು ಶಾಸಕರ ಜತೆ ಸಮಾಲೋಚನೆ ನಡೆಸಲಾಗಿದ್ದು, ಬೇಡಿಕೆಗಳ ಈಡೇರಿಕೆಗೆ ಸೂಕ್ತ ಕ್ರಮಕೈಗೊಳ್ಳವಂತೆ ಮನವಿ ಮಾಡಲಾಯಿತು.
ಕೊಂಕಣ ರೈಲ್ವೆ ಪಾಲುದಾರ ರಾಜ್ಯವಾದ ಕರ್ನಾಟಕ ತನ್ನ ಪಾಲಿನ 270 ಕೋಟಿ ರೂ. ಮೌಲ್ಯದ ಷೇರನ್ನು ಕೇಂದ್ರ ಸರ್ಕಾರಕ್ಕೆ ಹಸ್ತಾಂತರಿಸುವ ಮೂಲಕ ಕೊಂಕಣ ನಿಗಮವನ್ನು ಭಾರತೀಯ ರೈಲ್ವೆ ಜತೆ ವಿಲೀನ ಮಾಡಬೇಕು. ಕೊಂಕಣ ನಿಗಮದ ಷೇರು ಇಟ್ಟುಕೊಂಡಲ್ಲಿ ತಕ್ಷಣವೇ ರಾಜ್ಯದ ಹಳಿ ಡಬ್ಲಿಂಗ್ ಮಾಡಲು ಬೇಕಾದ ಸುಮಾರು 2000 ಕೋಟಿ ರೂ. ಹಣ ಕೊಂಕಣ ನಿಗಮಕ್ಕೆ ನೀಡಿ, ಕರಾವಳಿಯ ಜನರ ರೈಲು ಸಮಸ್ಯೆಗಳನ್ನು ಬಗೆಹರಿಸಬೇಕು ಎಂಬ ಬೇಡಿಕೆಯನ್ನು ಶಾಸಕರು ವಿಧಾನಮಂಡಲದಲ್ಲಿ ಇಡುವ ಕುರಿತು ನಿರ್ಧರಿಸಲಾಯಿತು. ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕುಂದಾಪುರ ಬೆಂಗಳೂರು ಮಧ್ಯೆ ಹೊಸ ಪಡೀಲ್ ಬೈಪಾಸ್ ರೈಲಿಗೆ ಬೇಡಿಕೆ ಸಲ್ಲಿಸಲಾಯಿತು. ಜತೆಗೆ ಕುಂದಾಪುರ ರೈಲು ನಿಲ್ದಾಣ ಮೇಲ್ದರ್ಜೆಗೆ ಏರಿಸುವ ಕುರಿತು ಸಂಬಂಧಪಟ್ಟ ಕೆಲಸಗಳನ್ನು ಶಾಸಕರ ನೇತೃತ್ವದಲ್ಲಿ ಕೈಗೊಳ್ಳುವುದು ಹಾಗೂ ಸಂಸದರ ಜತೆ ಸಭೆ ನಡೆಸುವ ಕುರಿತು ತೀರ್ಮಾನಿಸಲಾಯಿತು.