ರಾಯಚೂರು: ವಾಹನಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಿದ್ದು, ಇದರಿಂದ ಅಪಘಾತಗಳ ಸಂಖ್ಯೆಯೂ ಜಾಸ್ತಿಯಾಗುತ್ತಿವೆ ಆದ್ದರಿಂದ ಜನರು ಎಚ್ಚರಿಕೆಯಿಂದ ವಾಹನ ಚಲಾಯಿಸುವಂತೆ ಎಸ್.ಪಿ ಎಂ.ಪುಟ್ಟಮಾದಯ್ಯ ಹೇಳಿದರು.
ನಗರದ ಸದರ್ ಬಜಾರ್ ಪೊಲೀಸ್ ಠಾಣೆ ಆವರಣದಲ್ಲಿ ಹಮ್ಮಿಕೊಂಡಿದ್ದ ಶಾಲಾ ಮಕ್ಕಳಿಗೆ ಸಂಚಾರಿ ನಿಯಮಗಳ ಕುರಿತು ಜಾಗೃತಿ ಕಾರ್ಯಕ್ರಮವನ್ನುದ್ದೇಶಿಸಿ ಸೋಮವಾರ ಮಾತನಾಡಿದರು.
ಶಾಲಾ ವಿದ್ಯಾರ್ಥಿಗಳು ತಮ್ಮ ಪೋಷಕರಿಗೆ ಸಂಚಾರ ನಿಯಮಗಳ ಕುರಿತು ಜಾಗೃತಿ ಮೂಡಿಸಬೇಕು. ಅಪಘಾತ ಚಿಕ್ಕದಾಗಿದ್ದರೂ ಅದರ ಪರಿಣಾಮದ ವ್ಯಾಪ್ತಿ ದೊಡ್ಡದಾಗಿರುತ್ತದೆ ಆದ್ದರಿಂದ ನಿಯಮಗಳ ಉಲ್ಲಂಘನೆಯಿಂದ ಸಂಭವಿಸಬಹುದಾದ ಅಪಘಾತಗಳ ಬಗ್ಗೆಯೂ ತಿಳಿಹೇಳಬೇಕು ಎಂದರು.
ಇದನ್ನೂ ಓದಿ: ಸಂಚಾರಿ ನಿಯಮಗಳ ಬಗ್ಗೆ ಅರಿವು
ಪೊಲೀಸ್ ಇಲಾಖೆ ಕೇವಲ ದಂಡ ವಿಧಿಸಿ ಸರ್ಕಾರಕ್ಕೆ ಕಟ್ಟುವ ಕೆಲಸ ಮಾಡುವುದಿಲ್ಲ, ಜನರ ರಕ್ಷಣೆ ನಮ್ಮ ಜವಾಬ್ದಾರಿಯಾಗಿರುತ್ತದೆ ಆದ್ದರಿಂದ ಜನರು ಜಾಗುರೂಕತೆಯಿಂದ ವಾಹನ ಚಲಾಯಿಸಬೇಕು ಎಂದು ಸಲಹೆ ನೀಡಿದರು.
ಇದೇ ವೇಳೆ ಎಎಸ್‌ಪಿ ಶಿವಕುಮಾರ ಮಾತನಾಡಿ, ನಗರದ ರಸ್ತೆಗಳಲ್ಲಿ ವಾಹನಗಳು ಮನಬಂದಂತೆ ನಿಲ್ಲಿಸಲಾಗುತ್ತಿದೆ. ವಾಹನಗಳ ಸಂಖ್ಯೆ ಹೆಚ್ಚಾದಂತೆ ಅಪಘಾತ ಹಾಗೂ ಪರಿಸರದ ಮೇಲೆಯೂ ದುಷ್ಪರಿಣಾಮ ಬೀರುವುದರಿಂದ ಜನರು ಸಾರ್ವಜನಿಕ ಸಾರಿಗೆ, ಆಟೋಗಳನ್ನು ಬಳಸಬೇಕು ಎಂದು ತಿಳಿಸಿದರು.
ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯಗೆ ಸಂಕಷ್ಟ ಗ್ಯಾರಂಟಿ
ಸದಾರ್ ಬಜಾರ್ ಠಾಣೆಯ ಪಿಐ ಉಮೇಶ ಕಾಂಬ್ಳೆ ಮಾತನಾಡಿ, 2023ರಲ್ಲಿ ಜಿಲ್ಲೆಯಲ್ಲಿ 630 ಅಪಘಾತ ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ 279 ಜನರು ಮೃತಪಟ್ಟಿದ್ದಾರೆ 855 ಜನರು ಗಾಯಗೋಂಡಿದ್ದಾರೆ. 2024ರ ಆ.25ರವರೆಗೆ ಒಟ್ಟು 459 ಅಪಘಾತಗಳು ಸಂಭವಿಸಿವೆ 216 ಜನರು ಸಾವನಪ್ಪಿದ್ದು, 561 ಜನ ಗಾಯಗೊಂಡಿದ್ದಾರೆ ಎಂದು ಮಾಹಿತಿ ನೀಡಿ, ಮಕ್ಕಳಿಗೆ ಸಂಚಾರಿ ನಿಯಮಗಳ ಕುರಿತು ಚಿತ್ರಗಳ ಸಹಿತ ಸಂಚಾರಿ ನಿಯಮಗಳ ಕುರಿತು ತಿಳಿಸಿದರು. ಈ ಸಂದರ್ಭದಲ್ಲಿ ಡಿವೈಎಸ್‌ಪಿ ಸತ್ಯನಾರಾಯಣರಾವ್, ಸಿಪಿಐ ನಾಗರಾಜ ಮೇಕ ಉಪಸ್ಥಿತರಿದ್ದರು.