ಜಿಲ್ಲೆ

ಹಳೆ ವೈಷಮ್ಯಕ್ಕೆ ಹೊಡೆದಾಟ: ವ್ಯಕ್ತಿ ಸಾವು

ರಾಯಚೂರು: ಹಳೆ ವೈಷಮ್ಯದಿಂದ ಎರಡು ಕುಟುಂಬದ ಮಧ್ಯೆ ಜಗಳವಾಗಿದ್ದು, ಹೊಡೆದಾಟದಲ್ಲಿ ಗಂಭೀರವಾಗಿ ಗಾಯಗೊಂಡ ವ್ಯಕ್ತಿ ಮೃತಪಟ್ಟ ಘಟನೆ ರಾಯಚೂರು ತಾಲೂಕಿನ ಮಿರ್ಜಾಪುರದಲ್ಲಿ ಶನಿವಾರ ನಡೆದಿದೆ.

ಒಂದೇ ಸಮುದಾಯದ ದೂಳ್ಳಯ್ಯ ಹಾಗೂ ಗೋವಿಂದ ಎನ್ನುವವರ ಕುಟುಂಬಗಳ ಸದಸ್ಯರು ವೃದ್ಧರೊಬ್ಬರ ಅಂತ್ಯಕ್ರಿಯೆ ವೇಳೆ ಹಳೆಯ ಧ್ವೇಷದಿಂದ ಕ್ಯಾತೆ ತೆಗೆದಿದ್ದು, ಎರಡು ಕುಟುಂಬಗಳ ಸದಸ್ಯರ ನಡುವೆ ಮಾತಿನ ಚಕಾಮಕಿ ಏರ್ಪಟ್ಟಿದೆ.

ವಾಗ್ವಾದ ಮಿತಿ ಮೀರಿ ಹೊಡೆದಾಟ ನಡೆದಿದ್ದು ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಭೀಮಣ್ಣ ನಾಯಕ(38) ಎಂಬಾತನನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಭೀಮಣ್ಣ ಮೃತಪಟ್ಟಿದ್ದಾನೆ.
ಬೆತ್ತ, ಬಡಿಗೆ, ಕುಡುಗೋಲಿನಿಂದ ಹೊಡೆದಾಟ ನಡೆದಿದೆ.

ಈ ಘಟನೆಯಲ್ಲಿ ರಾಮಲಮ್ಮ, ಅಲಾರಿ ನಾಯಕ್, ದೂಳ್ಳಯ್ಯ ಸೇರಿದಂತೆ ಆರು ಜನರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೊಲೆ ಆರೋಪದಡಿ ಯರ್ರಣ್ಣ, ದೂಳ್ಳಯ್ಯ, ತಾಯಪ್ಪ, ಭೀಮೇಶ ಎಂಬುವವರನ್ನು ಬಂದಿಸಲಾಗಿದ್ದು, 22 ಜನರ ವಿರುದ್ಧ ಇಡಪನೂರು ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ. ಮಿರ್ಜಾಪುರದಲ್ಲಿ ಬಿಗುವಿನ ವಾತವರಣ ನಿರ್ಮಾಣವಾಗಿದೆ.