

ಗುಂಡ್ಲುಪೇಟೆ: ಪಟ್ಟಣದ ಜಾಕೀರ್ ಹುಸೇನ್ ನಗರದಲ್ಲಿ ಎರಡು ಗುಂಪುಗಳ ನಡುವೆ ಮಂಗಳವಾರ ರಾತ್ರಿ ಘರ್ಷಣೆ ನಡೆದು ಮೂವರು ಮೃತಪಟ್ಟು, ಐವರು ಗಾಯಗೊಂಡ ಘಟನೆ ವರದಿಯಾಗಿದೆ. ರಂಜಾನ್ ಹಬ್ಬದ ಮಾರನೇ ದಿನ ರಾತ್ರಿ ಈ ಘರ್ಷಣೆಯಾಗಿದ್ದು ಎರಡು ಕುಟುಂಬಗಳ ನಡುವಿನ ವೈಷಮ್ಯ ಎಲ್ಲೆ ಮೀರಿದ್ದು ಇದಕ್ಕೆ ಕಾರಣ.
ಮೃತರನ್ನು ಜಕಾವುಲ್ಲಾ ಖಾನ್(32), ಇದ್ರಿಶ್(34), ಖೈಸರ್(29) ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ನಸರ್ವುಲ್ಲಾ(40), ಉಮರ್(22), ಜಾಜೂ(17), ಅಲೀಂ(22), ಮುಜೀಬುಲ್ಲಾ(30) ಎಂದು ಗುರುತಿಸಲಾಗಿದೆ. ಗಾಯಾಳುಗಳು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕತ್ಸೆ ಪಡೆಯತ್ತಿದ್ದಾರೆ. ಮುಜೀಬುಲ್ಲಾ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: VIDEO: ಮಿಡತೆಗಳ ಹಾವಳಿ ಹೇಗಿದೆ ನೋಡಿ!
ಗುಂಡ್ಲುಪೇಟೆ ಪಟ್ಟಣದ ಜಾಕಿರ್ ಹುಸೇನ್ ನಗರದಲ್ಲಿರುವ ಇನಾಯಿತ್ ಮತ್ತು ನೂರುಲ್ಲಾ ಎರಡು ಕುಟುಂಬಗಳ ನಡುವೆ ಹಲವು ವರ್ಷಗಳಿಂದ ವೈಯಕ್ತಿಕ ದ್ವೇಷ ಮಡುಗಟ್ಟಿತ್ತು. ನಿನ್ನೆ ರಾತ್ರಿ ಜಗಳ ವಿಕೋಪಕ್ಕೆ ತಿರುಗಿ ಇನಾಯತ್ ಕಡೆಯವರು ನೂರುಲ್ಲಾ ಕಡೆಯ ಮೂವರನ್ನು ಲಾಂಗು ಮಚ್ಚುಗಳಿಂದ ದಾರುಣವಾಗಿ ಕೊಚ್ಚಿ ಕೊಲೆ ಮಾಡಿದ್ದಾರೆ. ಘಟನೆ ನಡೆದ ರಾತ್ರಿಯಿಂದ ಗುಂಡ್ಲುಪೇಟೆಯಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣಗೊಂಡಿತ್ತು.
ಘಟನಾ ಸ್ಥಳದಲ್ಲಿ ಐಜಿಪಿ ವಿಫುಲ್ ಕುಮಾರ್, ಚಾಮರಾಜನಗರ ಎಸ್ಪಿ ಗುಂಡ್ಲುಪೇಟೆಯಲ್ಲಿ ಮೊಕ್ಕಾಂ ಹೂಡಿದ್ದು ಘಟನೆಗೆ ಸಂಬಂಧಿಸಿದ ನಾಲ್ವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಉಳಿದ ಆರೋಪಿಗಳ ಸೆರೆಗೆ ವಿಶೇಷ ತಂಡ ರಚನೆ ಮಾಡಲಾಗಿದೆ. ಪಟ್ಟಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿದ್ದು ಪೋಲೀಸರು ಬಂದೋಬಸ್ತ್ ಏರ್ಪಡಿಸಿದ್ದಾರೆ.