More

    ಬಂಡೀಪುರದಲ್ಲಿ ಬತ್ತಿದ ಕೆರೆಗಳು

    ಗುಂಡ್ಲುಪೇಟೆ: ಯುಗಾದಿ ಕಳೆದರೂ ಮಳೆ ಬೀಳದೆ ಬಿರು ಬಿಸಿಲಿನ ಹೊಡೆತಕ್ಕೆ ಬಂಡೀಪುರ ಅರಣ್ಯದಲ್ಲಿರುವ ವನ್ಯಜೀವಿಗಳು ಬಸವಳಿದಿದ್ದು, ಕುಡಿಯುವ ನೀರಿಗಾಗಿ ಪರದಾಡುತ್ತಿವೆ.

    ಕಳೆದ ವರ್ಷ ಪೂರ್ವ ಮುಂಗಾರು ಹಾಗೂ ಹಿಂಗಾರು ಕೈಕೊಟ್ಟ ಪರಿಣಾಮ ಸೆಪ್ಟೆಂಬರ್ ವೇಳೆಗೆ ಅರಣ್ಯ ಪ್ರದೇಶದಲ್ಲಿನ ಮರ, ಗಿಡಗಳು ಒಣಗಲು ಆರಂಭಿಸಿತ್ತು. ಇದೀಗ ಬೇಸಿಗೆಯ ಸುಡು ಬಿಸಿಲಿನಿಂದ ಹುಲ್ಲು ಗರಿಕೆಗಳು ಒಣಗಿ ಇಡೀ ಬಂಡೀಪುರವೇ ಸುಡುಗಾಡಿನಂತೆ ಕಾಣುತ್ತಿದೆ. ವಸಂತ ಮಾಸದಲ್ಲಿ ಚಿಗುರಿದ ಗಿಡಗಳಲ್ಲಿ ಮಾತ್ರ ಹಸಿರು ಕಾಣಿಸುತ್ತಿದ್ದರೂ ನೆಲದಲ್ಲಿ ಹುಲ್ಲು ಗರಿಕೆ ಹಾಗೂ ಮೇಯಲು ಯೋಗ್ಯ ಸಸ್ಯಗಳು ಬೆಳೆಯದೆ ಸಸ್ಯಾಹಾರಿ ಪ್ರಾಣಿಗಳಿಗೆ ಮೇವಿನ ಕೊರತೆ ಕಾಡುತ್ತಿದೆ. ಪರಿಣಾಮ ಒಣಗಿದ ಹುಲ್ಲುಗರಿಕೆಗಳನ್ನು ಮೇಯುತ್ತ ಹೊಟ್ಟೆ ತುಂಬಿಸಿಕೊಳ್ಳಲು ಯತ್ನಿಸುತ್ತಿರುವುದು ಮನಕಲಕುವಂತಿದೆ.

    ಬಂಡೀಪುರ ಸಫಾರಿ ವಲಯದಲ್ಲಿ ಬತ್ತಿಹೋದ ಕೆರೆಗಳ ಕೆಸರಿನ ನಡುವೆ ನೀರು ಕುಡಿಯಲು ಪರದಾಡುತ್ತಿರುವ ಚಿರತೆ, ಜಿಂಕೆಗಳು ಅಲ್ಪಸ್ವಲ್ಪ ನೀರಿನಲ್ಲಿ ದಾಹ ತಣಿಸುತ್ತಿರುವ ಆನೆಗಳು, ದೇಹದ ತಾಪಮಾನ ಕಡಿಮೆ ಮಾಡಿಕೊಳ್ಳಲು ನೀರಿನಲ್ಲಿ ಮುಳುಗಿರುವ ಹುಲಿಗಳು ಬೇಸಿಗೆಯಲ್ಲಿ ವನ್ಯಜೀವಿಗಳ ಸಂಕಷ್ಟವನ್ನು ಹೊರಜಗತ್ತಿಗೆ ತೆರೆದಿಡುತ್ತಿವೆ.

    ಈ ಬಾರಿ ಮಳೆ ಕೊರತೆಯಿಂದ ಬಂಡೀಪುರದ ಎಲ್ಲ 13 ವಲಯಗಳಲ್ಲಿಯೂ ಬಹುತೇಕ ಕೆರೆಗಳೂ ಬತ್ತಿಹೋಗಿವೆ. ಸೋಲಾರ್ ಮೋಟಾರ್ ಮೂಲಕ ಕೊಳವೆ ಬಾವಿಯಿಂದ ನೀರು ತುಂಬಿಸುತ್ತಿರುವ ಕೆರೆಗಳನ್ನು ಬಿಟ್ಟರೆ ಯಾವ ಕೆರೆಗಳಲ್ಲಿಯೂ ನೀರಿಲ್ಲದೆ ವನ್ಯಜೀವಿಗಳು ಕುಡಿಯುವ ನೀರಿಗೆ ಪರದಾಡುತ್ತಿವೆ. ಕೇರಳದಲ್ಲಿಯೂ ಪೂರ್ವ ಮುಂಗಾರು ಆರಂಭವಾಗದ ಕಾರಣ ಮೂಲೆಹೊಳೆಯಲ್ಲಿ ನೀರಿನ ಹರಿವು ಸಂಪೂರ್ಣ ನಿಂತುಹೋಗಿದೆ. ಕಲ್ಲು ಗುಂಡಿಗಳ ನಡುವೆ ನಿಂತಿರುವ ನೀರು ಕುಡಿದು ದಾಹ ತಣಿಸಿಕೊಳ್ಳುವಂತಾಗಿದೆ.

    ಬೇಸಿಗೆ ಆರಂಭದಲ್ಲಿಯೇ ಆನೆಗಳು, ಕಾಟಿ ಮುಂತಾದ ದೈತ್ಯಜೀವಿಗಳು ಕಬಿನಿ ಹಿನ್ನೀರು ಹಾಗೂ ತಮಿಳುನಾಡಿನ ರಾಜ್ಯದ ಗಡಿಯಾದ ಮೋಯಾರ್ ಹೊಳೆಯತ್ತ ತೆರಳಿವೆ. ಆದರೆ ಜಿಂಕೆಗಳು, ಸೀಳುನಾಯಿಗಳು, ಹುಲಿ ಮತ್ತು ಚಿರತೆ ಹಾಗೂ ಸ್ವಲ್ಪ ಮಟ್ಟಿಗೆ ಆನೆಗಳು ಮಾತ್ರ ಬಂಡೀಪುರ ಅರಣ್ಯ ಪ್ರದೇಶದಲ್ಲಿ ಉಳಿದುಕೊಂಡಿವೆ. ಇವುಗಳು ಮೇವು ಹಾಗೂ ಕುಡಿಯುವ ನೀರಿಗೆ ಪರದಾಡುತ್ತಿವೆ.

    ಕಾಡಂಚಿನ ಗ್ರಾಮಗಳತ್ತ ಜಿಂಕೆ, ಸಾರಂಗ: ಬಂಡೀಪುರ ಸಫಾರಿಗೆ ಹೋಗುವ ಪ್ರವಾಸಿಗರಿಗೆ ಬರಿದಾದ ಕೆರೆಗಳಲ್ಲಿ ನೀರಿನ ಸೆಲೆ ಅರಸುತ್ತಿರುವ ಸಾಂಬಾರ್‌ಗಳು, ಮೊಣಕಾಲುದ್ದದ ನೀರಿನಲ್ಲಿ ದಾಹ ತಣಿಸುತ್ತಿರುವ ಆನೆಗಳು, ಕಿರುಬನ ಕೊಳಚಿ ಕೆರೆಯ ಕೆಸರು ಗುಂಡಿಯಲ್ಲಿ ನೀರು ಕುಡಿಯುತ್ತಿರುವ ಚಿರತೆ ಕಂಡುಬರುತ್ತಿವೆ. ಬೇಸಿಗೆಯ ಬಿಸಿಲ ತಾಪದಿಂದ ಪಾರಾಗಲು ಹುಲಿಗಳು ಕೆರೆಗಳ ನೀರಿನಲ್ಲಿ ಮಲಗುತ್ತಿವೆ. ಇದರಿಂದ ಜಿಂಕೆ, ಸಾರಂಗ, ಕಡವೆ ಮುಂತಾದ ವನ್ಯಜೀವಿಗಳು ಕೆರೆಗಳತ್ತ ಸುಳಿಯದೆ ಕಾಡಂಚಿನ ಗ್ರಾಮಗಳತ್ತ ತೆರಳುತ್ತಿವೆ.

    ಶೌಚಗೃಹ ಬಂದ್: ಬಂಡೀಪುರ ಮಾರ್ಗವಾಗಿ ಸಂಚರಿಸುವ ಪ್ರಯಾಣಿಕರ ಅನುಕೂಲಕ್ಕೆ ಅರಣ್ಯ ಇಲಾಖೆ ಆರಂಭಿಸಿದ್ದ ಶೌಚಗೃಹಗಳಲ್ಲೂ ನೀರಿನ ಕೊರತೆ ಎದುರಾಗಿದ್ದರಿಂದ ಬಂದ್ ಮಾಡಲಾಗಿದೆ. ಪರಿಸರ ಸೂಕ್ಷ್ಮ ಪ್ರದೇಶಕ್ಕೆ ಸೇರಿದ ತಮಿಳುನಾಡು ರಸ್ತೆಯ ಕೆಕ್ಕನಹಳ್ಳದ ತೆರೆದ ಬಾವಿಯಲ್ಲಿ ಸದಾಕಾಲ ನೀರಿನ ಸಂಗ್ರಹವಿದ್ದ ಕಾರಣ ಅರಣ್ಯ ಇಲಾಖೆ ಚೆಕ್‌ಪೋಸ್ಟ್‌ನಲ್ಲಿ ಕಳೆದ ಆರು ತಿಂಗಳ ಹಿಂದೆ ಶೌಚಗೃಹ ತೆರೆದು ಬಾವಿಯಿಂದ ನೀರಿನ ಸಂಪರ್ಕ ನೀಡಿತ್ತು. ಆದರೆ ಕಳೆದ ಕೆಲವು ದಿನಗಳಿಂದ ಬಾವಿಯಲ್ಲಿ ನೀರು ಬರಿದಾಗಿದ್ದರಿಂದ ಶೌಚಗೃಹ ಬಂದ್ ಮಾಡಲಾಗಿದೆ.

    ಬಂಡೀಪುರ ಹುಲಿ ಯೋಜನೆಯಡಿ 400ಕ್ಕೂ ಹೆಚ್ಚಿನ ಕೆರೆಗಳಿವೆ. ಮಂಗಲ ಡ್ಯಾಂ, ತಾವರೆಕಟ್ಟೆ ಸೇರಿದಂತೆ ನಾಲ್ಕಾರು ದೊಡ್ಡ ಕೆರೆಗಳಲ್ಲಿ ನೀರಿನ ಸಂಗ್ರಹವಿದೆ. 57 ಕೆರೆಗಳಿಗೆ ಸೋಲಾರ್ ಮೋಟಾರ್ ಮೂಲಕ ನೀರು ತುಂಬಿಸಲಾಗುತ್ತಿದ್ದು ಮಳೆ ಬೀಳುವ ನಿರೀಕ್ಷೆಯಲ್ಲಿದ್ದೇವೆ.
    ನವೀನ್ ಎಸಿಎಫ್, ಬಂಡೀಪುರ ವಲಯ

    ಸೋಲಾರ್ ಮೋಟಾರ್‌ನಿಂದ ನೀರು ತುಂಬಿಸುವ ಕೆರೆಗಳಲ್ಲಿ ನೀರಿನ ಸಂಗ್ರಹವಿದ್ದರೂ ಬಿಸಿಲಿನ ತಾಪ ತಣಿಸಲು ಹುಲಿಗಳು ನೀರಿನಲ್ಲಿ ಮಲಗುವುದರಿಂದ ಸಸ್ಯಾಹಾರಿ ವನ್ಯಜೀವಿಗಳು ಅತ್ತ ತಲೆ ಹಾಕಲಾಗುತ್ತಿಲ್ಲ. ಆದ್ದರಿಂದ ಅರಣ್ಯ ಇಲಾಖೆ ಅಲ್ಲಲ್ಲಿ ತೊಟ್ಟಿಗಳನ್ನು ನಿರ್ಮಿಸಿ ಟ್ಯಾಂಕರ್‌ಗಳಿಂದ ನೀರು ತುಂಬಿಸುವ ಕೆಲಸ ಮಾಡಬೇಕು.
    ಆರ್.ಕೆ.ಮಧು, ಅಂತಾರಾಷ್ಟ್ರೀಯ ವನ್ಯಜೀವಿ ಛಾಯಾಗ್ರಾಹಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts