ಜಿಲ್ಲೆ

ಪತ್ನಿ ತವರಿಗೆ ಹೋದ ಬೆನ್ನಲ್ಲೇ ಪ್ರೇಯಸಿ ಜತೆ ನೇಣಿಗೆ ಶರಣು: ಮುಳುವಾಯ್ತು ವಿವಾಹೇತರ ಸಂಬಂಧ!

ರಾಯಚೂರು: ಇಬ್ಬರಿಗೂ ಬೇರೆ ಮದುವೆಯಾಗಿದ್ದರೂ ಅಕ್ರಮ ಸಂಬಂಧದಲ್ಲಿದ್ದ ಪ್ರೇಮಿಗಳಿಬ್ಬರು ವೈಮನಸ್ಸಿನಿಂದಾಗಿ ನೇಣಿಗೆ ಶರಣಾಗಿರುವ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಹೇಮನಾಳ ಗ್ರಾಮದಲ್ಲಿ ನಡೆದಿದೆ.

ರಂಗಣ್ಣ ನಾಯಕ್ (30) ಮತ್ತು ರಂಗಮ್ಮ (18) ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು. ಮದುವೆಯಾಗಿ ಆರು ವರ್ಷವಾದರೂ ರಂಗಣ್ಣ ನಾಯಕ್​ಗೆ ಮಕ್ಕಳಾಗಿರಲಿಲ್ಲ. ಹೀಗಾಗಿ ಚಪ್ಪರ ಗುಂಡಿ ಮಸೀದಿ ಗ್ರಾಮದ ರಂಗಮ್ಮ ಜತೆ ಅಕ್ರಮ ಸಂಬಂಧ ಬೆಳೆಸಿದ್ದ. ರಂಗಮ್ಮ ಸಹ ವಿವಾಹವಾಗಿದ್ದಳು. ಆಕೆಯ ಪತಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾನೆ. ತವರು ಮನೆಯಲ್ಲಿ ಉಳಿದುಕೊಂಡಿದ್ದ ರಂಗಮ್ಮ, ರಂಗಣ್ಣ ನಾಯಕ್ ಜತೆ ಅಕ್ರಮ ಸಂಬಂಧ ಹೊಂದಿದ್ದಳು.

ಜಾತ್ರೆಯ ನಿಮಿತ್ತ ರಂಗಣ್ಣನ ಪತ್ನಿ ಶಿವಮ್ಮ ತನ್ನ ತವರುಮನೆ ಕೊತ್ತದೊಡ್ಡಿ ಗ್ರಾಮಕ್ಕೆ ಹೋಗಿದ್ದಳು. ಈ ವೇಳೆ ರಂಗಣ್ಣನ ಮನೆಗೆ ರಂಗಮ್ಮ ಬಂದಿದ್ದಾಳೆ. ಈ ವೇಳೆ ಇಬ್ಬರ ನುಡವೆ ವೈಮನಸ್ಸು ಉಂಟಾಗಿ ಆತ್ಮಹತ್ಯೆಯ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಪತಿಯ ಸಾವಿನ ಬಳಿಕವಷ್ಟೇ ಪತ್ನಿ ಶಿವಮ್ಮಳಿಗೆ ಅಕ್ರಮ ಸಂಬಂಧದ ಬಗ್ಗೆ ತಿಳಿದುಬಂದಿದೆ. ಮೃತನ ಪತ್ನಿ ಶಿವಮ್ಮಳ ಹೇಳಿಕೆ ಆಧಾರದ ಮೇಲೆ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)