ಜಿಲ್ಲೆ

ನಾಯಿಗಳ ದಾಳಿಯಿಂದ ಕೃಷ್ಣಮೃಗ ರಕ್ಷಿಸಿದ ಯೋಧರು

ರಾಯಚೂರು: ಹೊರವಲಯದ ಏಗನೂರು ಗ್ರಾಮದಲ್ಲಿ ನಾಯಿಗಳ ದಾಳಿಗೆ ಸಿಲುಕಿದ್ದ ಕೃಷ್ಣಮೃಗವನ್ನು ಚುನಾವಣೆ ಕರ್ತವ್ಯಕ್ಕಾಗಿ ಆಗಮಿಸಿರುವ ಸಿಆರ್‌ಪಿಎಫ್ ಯೋಧರು ಶನಿವಾರ ರಕ್ಷಣೆ ಮಾಡಿದ್ದಾರೆ.

ನಗರದ ಯರಮರಸ್ ಹತ್ತಿರವಿರುವ ಕೆಐಎಡಿಬಿ ವಸತಿ ಬಡಾವಣೆಯಲ್ಲಿ ವಾಸವಾಗಿರುವ ಯೋಧರು, ಬೆಳಗ್ಗೆ ಕೃಷ್ಣಮೃಗದ ಮೇಲೆ ನಾಲ್ಕೈದು ನಾಯಿಗಳು ದಾಳಿ ನಡೆಸಿದ್ದನ್ನು ಕಂಡು ನಾಯಿಗಳನ್ನು ಓಡಿಸಿದ್ದಾರೆ.

ನಾಯಿ ಕಚ್ಚಿದ್ದರಿಂದ ಗಾಯಗೊಂಡಿದ್ದ ಕೃಷ್ಣಮೃಗವನ್ನು ಪಶು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ನಂತರ ಕೃಷ್ಣಮೃಗವನ್ನು ಅರಣ್ಯ ಇಲಾಖೆ ಸಿಬ್ಬಂದಿಗೆ ಹಸ್ತಾಂತರಿಸಲಾಗಿದ್ದು, ಯೋಧರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.