ರಾಯಚೂರು: ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಬ್ಯಾಂಕ್ ನೌಕರ ಕೊಚ್ಚಿಹೋದ ಘಟನೆ ರಾಯಚೂರು ತಾಲೂಕಿನ ಫತ್ತೆಪೂರ ಗ್ರಾಮದಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ.
ರಾಯಚೂರು ನಗರದ ಖಾಸಗಿ ಬ್ಯಾಂಕ್‌ವೊಂದರಲ್ಲಿ ಕಲೆಕ್ಷನ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ವೆಂಕಟಾಪೂರ ಗ್ರಾಮದ ನಿವಾಸಿ ಬಸವರಾಜ್(33) ಹಳ್ಳದಲ್ಲಿ ಕೊಚ್ಚಿ ಹೋಗಿದ್ದಾನೆ. ರಾತ್ರಿ ಕೆಲಸ ಮುಗಿಸಿಕೊಂಡು ಊರಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಜರುಗಿದೆ.
ನಿರಂತರವಾಗಿ ಮಳೆಯಾದ ಕಾರಣ ಫತ್ತೆಪೂರ ಹಳ್ಳದಲ್ಲಿ ನೀರಿನ ಪ್ರಮಾಣ ಹೆಚ್ಚಾಗಿತ್ತು. ಹಳ್ಳದ ಆಚೆ ಇರುವ ವೆಂಕಟಾಪೂರ ಗ್ರಾಮಕ್ಕೆ ರಾತ್ರಿ ಬೈಕ್‌ನಲ್ಲಿ ತೆರಳುತ್ತಿದ್ದ ಬಸವರಾಜ್ ಹಳ್ಳದಲ್ಲಿ ನೀರು ಹರಿಯುತ್ತಿದ್ದರಿಂದ ಬೈಕನ್ನು ಹಳ್ಳದ ದಡದಲ್ಲಿದ್ದ ದೇವಸ್ಥಾನವೊಂದರಲ್ಲಿ ಬಿಟ್ಟು ನಡೆದುಕೊಂಡು ಹಳ್ಳ ದಾಟುತ್ತಿದ್ದ ವೇಳೆ ಕಾಲು ಜಾರಿ ಹಳ್ಳಕ್ಕೆ ಬಿದ್ದಿದ್ದ ಎನ್ನಲಾಗಿದೆ.
ಹಳ್ಳ ದಾಟುವ ವೇಳೆ ಈತನ ಜತೆಗೆ ಇನ್ನೂ 8 ಜನರಿದ್ದರು ಅದರಲ್ಲಿಇಬ್ಬರು ಬಸವರಾಜ್ ಜತೆಗೆ ಹಳ್ಳಕ್ಕೆ ಬಿದ್ದಿದ್ದರು ಆದರೆ ಈಜಿ ದಡ ಸೇರಿದ್ದರು. ಉಳಿದ ಆರು ಜನರು ಹಳ್ಳ ದಾಟಲು ಹಿಂದೇಟು ಹಾಕಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕಾಗಮಿಸಿ ಶೋಧ ಕಾರ್ಯ ಮುಂದುವರೆಸಿದ್ದಾರೆ.