ಜಿಲ್ಲೆ

ಸ್ಥಳೀಯರಿಗೆ ಉಸ್ತುವಾರಿ ನೀಡದಿದ್ದರೆ ಜಿಲ್ಲೆ ಬಂದ್

ರಾಯಚೂರು: ಬೇರೆ ಜಿಲ್ಲೆ ಮೂಲದ ಸಚಿವರಿಗೆ ರಾಯಚೂರು ಜಿಲ್ಲಾ ಉಸ್ತುವಾರಿ ಜವಾಬ್ದಾರಿ ನೀಡಿರುವುದಕ್ಕೆ ವಿರೋಧವಿದೆ. ಸ್ಥಳೀಯರಿಗೆ ಉಸ್ತುವಾರಿ ನೀಡಲು ಆಗ್ರಹಿಸಿ ಮುಖ್ಯಮಂತ್ರಿ ಬಳಿ ನಿಯೋಗ ಕರೆದೊಯ್ಯಲಾಗುವುದು ಎಂದು ರಾಯಚೂರು ನಾಗರಿಕ ವೇದಿಕೆ ಸಂಚಾಲಕ ಜಿ.ಅಮರೇಶ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದರು. ಅನ್ಯ ಜಿಲ್ಲೆಯವರಾದ ಡಾ.ಶರಣಪ್ರಕಾಶ ಪಾಟೀಲೆ ಉಸ್ತುವಾರಿ ನೀಡಿರುವುದನ್ನು ವಿರೋಧಿಸಿ ಜಿಲ್ಲಾದ್ಯಂತ ಹೋರಾಟ ನಡೆಯುತ್ತಿವೆ. ಸರ್ಕಾರ ಬೇಡಿಕೆಯನ್ನು ಮಣಿಸದಿದ್ದರೆ ಜಿಲ್ಲೆ ಬಂದ್‌ಗೆ ಕರೆ ನೀಡಲಾಗುವುದು ಎಂದು ಎಚ್ಚರಿಸಿದರು.
ಜಿಲ್ಲೆಯಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ಸ್ಥಳೀಯರನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡಬೇಕು. ಹಲವು ವರ್ಷಗಳಿಂದ ಹೊರ ಜಿಲ್ಲೆಯವರಿಗೆ ಉಸ್ತುವಾರಿ ನೀಡುತ್ತಿರುವುದರಿಂದ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ. ಎನ್.ಎಸ್.ಬೋಸರಾಜುಗೆ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ನೀಡಬೇಕು ಎಂದು ಒತ್ತಾಯಿಸಿದರು.

ಪೊಲೀಸರಿಂದ ಗುಂಡಾ ಪ್ರವೃತ್ತಿ

ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಭಾನುವಾರ ನಗರಕ್ಕೆ ಆಗಮಿಸಿದಾಗ ವೇದಿಕೆಯಿಂದ ಶಾಂತಿಯುತವಾಗಿ ಪ್ರತಿಭಟನೆ ನಡೆಸಲಾಗುತ್ತಿತ್ತು. ಆದರೆ, ಪೊಲೀಸರು ಲಾಠಿ ಪ್ರಹಾರ ನಡೆಸಿ ಬಂಧಿಸಿರುವುದು ಗೂಂಡಾ ಪ್ರವೃತ್ತಿಯಾಗಿದೆ. ಜಿಲ್ಲಾ ಉಸ್ತುವಾರಿ ಬದಲಾವಣೆ ಮಾಡುವವರೆಗೆ ಹೋರಾಟ ಕೈಬಿಡುವುದಿಲ್ಲ. ರಾಯಚೂರು ನಗರ ಕ್ಷೇತ್ರದ ಶಾಸಕ ಡಾ.ಶಿವರಾಜ ಪಾಟೀಲ್ ಕ್ಷೇತ್ರಕ್ಕೆ ಆರು ಸಾವಿರ ಕೋಟಿ ರೂ. ಅನುದಾನ ತಂದಿರುವುದಾಗಿ ಹೇಳುತ್ತಿದ್ದಾರೆ. ಅನುದಾನ ಎಲ್ಲಿ ಖರ್ಚಾಗಿದೆ ಎನ್ನುವುದನ್ನು ತಿಳಿಸಬೇಕು ಎಂದು ಜಿ.ಅಮರೇಶ ತಿಳಿಸಿದರು.


ವೇದಿಕೆ ಸಂಚಾಲಕ ಎಸ್.ಮಾರೆಪ್ಪ ಮಾತನಾಡಿ, ಜಿಲ್ಲೆಯವರಿಗೆ ಉಸ್ತುವಾರಿ ನೀಡಬೇಕು ಎನ್ನುವುದು ಸ್ವಾಭಿಮಾನದ ಹೋರಾಟವಾಗಿದೆ. ಕೆಪಿಸಿಸಿ ಕಾರ್ಯದರ್ಶಿ ಎ.ವಸಂತಕುಮಾರ ಹೋರಾಟ ರಾಜಕೀಯ ಪ್ರೇರಿತ ಎಂದು ಹೇಳಿರುವುದು ಸರಿಯಲ್ಲ. ಈ ಕುರಿತ ಹೇಳಿಕೆಗೆ ವಸಂತ ಕುಮಾರ ಕೂಡಲೇ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು. ಪದಾಧಿಕಾರಿಗಳಾದ ಶಿವಕುಮಾರ ಯಾದವ, ಜೆ.ಬಿ.ರಾಜು, ಎಂ.ಆರ್.ಭೇರಿ, ಖಾಜಾ ಅಸ್ಲಂ, ಸಿರಾಜ್ ಜಾಫ್ರಿ, ಶ್ರೀನಿವಾಸ, ವೆಂಕಟೇಶ ಇತರರಿದ್ದರು.