ಜಿಲ್ಲೆ

ದರ್ವೇಶ್ ಗ್ರೂಪ್‌ನ ಸಹವರ್ತಿಗಳು ವಶಕ್ಕೆ: ಸಿಐಡಿ ಅಧಿಕಾರಿಗಳಿಂದ ಚುರುಕುಗೊಂಡ ತನಿಖೆ

Gangavati - Shashidhara Shashidhara

ರಾಯಚೂರು: ದರ್ವೇಶ್ ಗ್ರೂಪ್ ಕಂಪನಿಯು ಜನರಿಂದ ಹಣ ಹೂಡಿಕೆ ಮಾಡಿಸಿಕೊಂಡು ಹೂಡಿಕೆಯ ಹಣ ಹಾಗೂ ಲಾಭಾಂಶವನ್ನು ನೀಡದೇ ವಂಚನೆ ಮಾಡಿದೆ. ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಸಾಕಷ್ಟು ಚರ್ಚೆಗಳು ನಡೆದಿದ್ದವು ಇದೀಗ ಸಿಐಡಿ ಅಧಿಕಾರಿಗಳು ಪ್ರಕರಣದ ಕುರಿತು ಹಂತ ಹಂತವಾಗಿ ತನಿಖೆ ಆರಂಭಿಸಿ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಹೂಡಿಕೆ ರೂಪದಲ್ಲಿ ಹಣವನ್ನು ಪಡೆದು ಹಣವನ್ನು ಮರಳಿಸದೇ ಸಾರ್ವಜನಿಕರಿಗೆ ಕಂಪನಿಯಿಂದ ವಂಚಿಸಲಾಗಿದೆ ಎಂದು ಜು.22ರಂದು ಹೂಡಿಕೆದಾರರು ದರ್ವೇಶ್ ಗ್ರೂಪ್ ಕಂಪನಿಯ ಕಚೇರಿಯ ಮೇಲೆ ದಾಳಿ ನಡೆಸಿ ಅಲ್ಲಿದ್ದ ಪೀಠೋಪಕರಣಗಳನ್ನು ದ್ವಂಸಗೊಳಿಸಿದ್ದರು. ಒಬ್ಬ ಹೂಡಿಕೆದಾರ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೂ ಯತ್ನಿಸಿದ್ದ. ಈ ವಿಚಾರದಿಂದ ನಗರದಲ್ಲಿ ಬಿಗುವಿನ ವಾತವರಣ ಸೃಷ್ಠಿಯಾಗಿತ್ತು.

ಇದೀಗ ಈ ಪ್ರಕರಣವನ್ನು ಸಿಐಡಿಗೆ ಒಪ್ಪಿಸಲಾಗಿದ್ದು, ಸಿಐಡಿ ಅಧಿಕಾರಿಗಳು ಕಂಪನಿಯ ಸಹವರ್ತಿಗಳು ಎನ್ನಲಾದ ಬಬ್ಲೂ, ಅಜರ್, ಮೋಸಿನ್ ಹಾಗೂ ಫಾರೂಕ್ ಎಂಬುವವರನ್ನು ವಶಕ್ಕೆ ಪಡೆದಿದ್ದಾರೆ. ಕಂಪನಿ ಮಾಲಿಕ ಮಹ್ಮದ್ ಹುಸೇನ್ ಶುಜಾ ಸೇರಿ ಇನ್ನಿತರ ಸಹವರ್ತಿಗಳ ಪತ್ತೆಗೆ ಪೊಲೀಸರು ಬಲೆ ಬಿಸಿದ್ದಾರೆ.

ಕಂಪನಿಯಿಂದ ಜನರಿಗೆ ವಂಚಿಸಲಾಗಿದೆ ಎಂದು ಆತ್ಮಹತ್ಯೆಗೆ ಯತ್ನಿಸಿದ್ದ ಹೂಡಿಕೆದಾರ ವೆಂಕಟೇಶ ಎಂಬುವವರ ಸಂಬಂಧಿ ಚಂದ್ರು ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು ಪೊಲೀಸರು ದೂರಿನನ್ವಯ ಪ್ರಕರಣವನ್ನು ದಾಖಲಿಸಿಕೊಂಡಿದ್ದರು. ಅದೇ ದಿನ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸೆಕ್ಯೂರಿಟಿ ಗಾರ್ಡ್ ಸಲೀಂ ಎನ್ನುವವರು ಕಂಪನಿಗೆ ಅಕ್ರಮವಾಗಿ ಪ್ರವೇಶಿಸಿ ಪೀಠೋಪಕರಣಗಳನ್ನು ದ್ವಂಸ ಗೊಳಿಸಿರುವ ಬಗ್ಗೆ ಹಾಗೂ ಕಂಪನಿ ಕಚೇರಿಗೆ ಹಾನಿ ಮಾಡಿದವರ ಮೇಲೆ ಮಾರ್ಕೇಟ್ ಯಾರ್ಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಪುಟ್ಟಮಾದಯ್ಯ ಕಂಪನಿಯ ಮೇಲೆ ದೂರು ದಾಖಲಿಸಲು ಇಚ್ಛಿಸುವವರು ಸಿಇಎನ್ ಠಾಣೆಯಲ್ಲಿ ದೂರು ದಾಳಿಸಬಹುದಾಗಿದೆ ಎಂದು ಪ್ರಕಟಣೆ ಮೂಲಕ ತಿಳಿಸಿದ್ದರು. ಈ ಎಲ್ಲ ಬೆಳವಣಿಗೆ ನಂತರ ವಿಧಾನಸೌಧನಲ್ಲಿ ಈ ಪ್ರಕರಣದ ಕುರಿತು ಚರ್ಚೆಯಾಗಿತ್ತು. ಕಂದಾಯ ಸಚಿವ ಕೃಷ್ಣಭೈರೇಗೌಡ ಈ ಪ್ರಕರಣವನ್ನು ಸಿಐಡಿಗೆ ವಹಿಸಿಲಾಗಿರುವ ಬಗ್ಗೆ ಸದನದಲ್ಲಿ ಪ್ರತಿಕ್ರಿಯೆ ನೀಡಿದ್ದರು.
ಜು.24ರ ಸಂಜೆ ಸಿಐಡಿ ಅಧಿಕಾರಿಗಳು ರಾಯಚೂರಿಗೆ ಭೇಟಿ ನೀಡಿ, ಜು.25ರಿಂದ ನಿರಂತರವಾಗಿ ಪ್ರಕರಣದ ಕುರಿತು ಮಾಹಿತಿ ಕಲೆಹಾಕುತ್ತಿದ್ದಾರೆ.

ಸಿಐಡಿ ಅಧಿಕಾರಿಗಳು ಭೇಟಿ ನಿಡಿದ್ದ ಬೆನ್ನಲ್ಲೆ ದರ್ವೇಶ್ ಗ್ರೂಪ್ ಕಂಪನಿಯ ಮಾಲಿಕ ಮಹ್ಮದ್ ಹುಸೇನ್ ಶುಜಾ ವಿಡಿಯೋ ರಿಲೀಸ್ ಮಾಡಿ, ಹಣವನ್ನು ಪಾವತಿ ಮಾಡಲಾಗುವುದು ಜು.5ರಂದು ಹೂಡಿಕೆಯ ಲಾಭಾಂಶದ ಹಣವನ್ನು ವಾಪಸ್ ಮಾಡುವುದಾಗಿ ತಿಳಿಸಿದ್ದ. ಇದೀಗ ದರ್ವೇಶ್ ಗ್ರೂಪ್‌ನ ಸಹವರ್ತಿಗಳು ಎನ್ನಲಾದ ನಾಲ್ಕು ಜನರನ್ನು ಪೊಲೀಸರು ವಶಕ್ಕೆ ಪಡೆದು ಸಿಐಡಿ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ.

ದರ್ವೇಶ್ ಗ್ರೂಪ್ ಮಾಲಿಕ ಮಹ್ಮದ್ ಹುಸೇನ್ ಶುಜಾಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ ಎಂದು ಬಲ್ಲಮೂಲಗಳಿಂದ ತಿಳಿದುಬಂದಿದೆ.
ಸಹವರ್ತಿಗಳ ವಿಚಾರಣೆ ನಡೆಸಲಿರುವ ಅಧಿಕಾರಿಗಳು ಪ್ರಕರಣದ ಕುರಿತು ತನಿಕೆಯನ್ನು ಇನ್ನೂ ಚುರುಕುಗೊಳಿಸಿದ್ದಾರೆ. ಇದಲ್ಲದೇ ಮುಂಬೈನಲ್ಲಿಯೂ ಶೋಧಕಾರ್ಯ ನಡೆದಿದೆ. ಉಳಿದ ಕಂಪನಿಯ ಪಾಲುದಾರರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಿದ್ದಾರೆ ಸಿಐಡಿ ಅಧಿಕಾರಿಗಳು.

ಒಟ್ಟಾರೆಯಾಗಿ ದರ್ವೇಶ್ ಗ್ರೂಪ್ ಕಂಪನಿಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಹಣ ಹೂಡಿಕೆ ಮಾಡಿರುವ ಜನರಿಗೆ ನ್ಯಾಯ ಸಿಗುವ ಸಾಧ್ಯತೆಯೂ ಕಂಡುಬರುತ್ತಿದೆ.