ಚಾಮರಸ ಮಾಲೀಪಾಟೀಲ್ 
ಜಿಲ್ಲೆ

ಕಾರ್ಪೋರೆಟ್ ಕಂಪನಿಗಳ ಬಲಪಡಿಸುವ ಬಜೆಟ್: ಚಾಮರಸ ಮಾಲೀಪಾಟೀಲ್ ಆಕ್ರೋಶ

Gangavati - Shashidhara Shashidhara

ರಾಯಚೂರು: ಇತ್ತೀಚೆಗೆ ಕೇಂದ್ರ ಸರ್ಕಾರದಿಂದ ಮಂಡಿಸಲಾದ ಬಜೆಟ್‌ನಲ್ಲಿ ರೈತರು ಹಾಗೂ ಕೃಷಿ ಕಾರ್ಮಿಕರನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂದು ಸರ್ವೋದಯ ಪಕ್ಷದ ರಾಜ್ಯಾಧ್ಯಕ್ಷ ಚಾಮರಸ ಮಾಲೀಪಾಟೀಲ್ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಶನಿವಾರ ಮಾತನಾಡಿ, ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಮಂಡಿಸಿರುವ ಈ ಬಾರಿಯ ಬಜೆಟ್ ದೇಶದ ಅಭಿವೃದ್ಧಿಗೆ ಪೂರಕವಾಗಿಲ್ಲ. ಕರ್ನಾಟಕ ರಾಜ್ಯವನ್ನು ನಿರ್ಲಕ್ಷಿೃಸಿದ ಬಜೆಟ್ ಇದಾಗಿದೆ ಎಂದರು.

ರೈತರ ಹಿತವನ್ನು ಕಾಪಾಡಬೇಕಾದ ಕೇಂದ್ರ ಸರ್ಕಾರ ರಸಗೊಬ್ಬರ ಮತ್ತು ಆಹಾರ ಸಬ್ಸಿಡಿಗಳನ್ನು ರದ್ದುಪಡಿಸಿದೆ. ದೇಶದಲ್ಲಿ ಸಾವಯುವ ಬೆಳೆಗೆ ಮಾರುಕಟ್ಟೆ ಇಲ್ಲದೇ ಬೆಳೆಗಳು ಕಾಲಕ್ರಮೇಣ ಕಡಿಮೆಯಾಗುತ್ತಿವೆ. ಈ ರೀತಿಯ ಹತ್ತು ಹಲವು ರೈತರ ಸಮಸ್ಯೆಗಳಿಗೆ ಸ್ಪಂಧಿಸಬೇಕಾದ ಸರ್ಕಾರ ಕೇವಲ ಕಾರ್ಪೋರೇಟ್ ಕಂಪನಿಗಳನ್ನು ಬಲಪಡಿಸಲು ಮುಂದಾಗಿರುವುದು ಖೇದರಕರ ಎಂದು ತಿಳಿಸಿದರು.

ಜಿಲ್ಲೆಯ ರೈತರಿಗೆ ಫಸಲ್ ಭಿಮಾ ಯೋಜನೆಯ ಹಣ ಜಮೆಯಾಗಿಲ್ಲ. ಬರ ಪರಿಹಾರವು ಸಿಕ್ಕಿಲ್ಲ ಇಂತಹ ಸಮಸ್ಯೆಗಳ ಬಗ್ಗೆ ಇಲ್ಲಿನ ಸಂಸದರು ಕೂಡ ಧ್ವನಿ ಎತ್ತುತ್ತಿಲ್ಲ, ರೈತರು, ಕಾರ್ಮಿಕರ ಮೇಲೆ ಕಾಳಜಿ ಇಲ್ಲವಾಗಿದೆ. ಇಲ್ಲಿನ ಜಿಲ್ಲೆಯ ಸಮಸ್ಯೆಗಳ ಕುರಿತು ಸರ್ಕಾರದ ಮೇಲೆ ಒತ್ತಡ ಹಾಕುವ ಪ್ರಯತ್ನವನ್ನೂ ಸಂಸದರು ಮಾಡುತ್ತಿಲ್ಲ ಎಂದು ದೂರಿದರು.

ಈಗಾಗಲೇ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಅಧಿಕಾರಕ್ಕೆ ಜನರು ಬೇಸತ್ತು ಹೋಗಿದ್ದು, ಇದೀಗ ಪರ್ಯಾಯ ರಾಜಕಾರಣದತ್ತ ಮುಖ ಮಾಡಬೇಕಾದ ಸಂದರ್ಭ ಎದುರಾಗಿದೆ. ರೈತರು ಈ ಬಗ್ಗೆ ಯೋಚಿಸಬೇಕಾಗಿದ್ದು, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಲಪಡಿಸುವಂತೆ ಹೇಳಿಲ್ಲ. ಬದಲಾಗಿ ಬಿಜೆಪಿಯನ್ನು ಸೋಲಿಸುವ ನಿಟ್ಟಿನಲ್ಲಿ ಇತರೆ ಪಕ್ಷಗಳಿಗೆ ಬೆಂಬಲಿಸುವಂತೆ ಹೇಳಲಾಗಿತ್ತು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರಾದ ಜಾನ್ ವೆಸ್ಲಿ, ಪ್ರಭಾಕರ್ ಪಾಟೀಲ್, ಅಂಬಣ್ಣ ಸೇರಿದಂತೆ ಇತರರಿದ್ದರು.