ಬಿಜೆಪಿ ಸೋಲಿಸಲು ರೈತ ಸಂಘ ಆಂದೋಲನ

chamarasa mali pati
ಚಾಮರಸ ಮಾಲೀಪಾಟೀಲ್
Published on

ಚಿಕ್ಕಮಗಳೂರು: ರೈತರಿಗೆ ಸುಳ್ಳು ಹೇಳುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸೋಲಿಸಲು ದೇಶಾದ್ಯಂತ ಆಂದೋಲನ ನಡೆಸುತ್ತಿದ್ದು ಅದರಂತೆ ಕರ್ನಾಟಕದಲ್ಲಿ ಬಿಜೆಪಿ ಸೋಲಿಸಲು ಮನೆ-ಮನೆಗೆ ಕರಪತ್ರ ಹಂಚಿ ಮನವರಿಕೆ ಮಾಡಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲೀಪಾಟೀಲ್ ತಿಳಿಸಿದರು.
ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ 10 ವರ್ಷಗಳಲ್ಲಿ ರೈತರಿಗೆ ಸುಳ್ಳು ಹೇಳುತ್ತ ಬಂದಿದ್ದಾರೆ. ಹೀಗಾಗಿ ಕರ್ನಾಟಕ ರಾಜ್ಯ ರೈತ ಸಂಘ, ಸರ್ವೋದಯ ಕರ್ನಾಟಕ ಪಕ್ಷ ಸೇರಿದಂತೆ 540 ರೈತಪರ ಸಂಘಟನೆಗಳು ಸೇರಿ ರಚಿಸಿಕೊಂಡಿರುವ ಸಂಯುಕ್ತ ಕಿಸಾನ್‌ನಿಂದ ದೇಶದಾದ್ಯಂತ ಎನ್‌ಡಿಎ ಸೋಲಿಸುವ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ರೈತರ ಸಾಲ ಮನ್ನಾ, ಕನಿಷ್ಠ ಬೆಂಬಲ ಬೆಲೆ, ಸ್ವಾಮಿನಾಥನ್ ವರದಿ ಜಾರಿಗೊಳಿಸುವುದಾಗಿ ಮೋದಿ ಭರವಸೆ ನೀಡಿದ್ದರು. ಆದರೆ 10 ವರ್ಷಗಳಾದರೂ ಕೊಟ್ಟ ಆಶ್ವಾಸನೆ ಈಡೇರಿಸಲಿಲ್ಲ. ರೈತರ ಸಾಲ ಮನ್ನಾ ಮಾಡದ ಮೋದಿ ಅವರು ಕಾರ್ಪೋರೇಟ್ ಕಂಪನಿಗಳ 14 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡುವ ಮೂಲಕ ರೈತರಿಗೆ ಮೋಸ ಮಾಡಿದ್ದಾರೆ. ರೈತರ ಆದಾಯ ದ್ವಿಗುಣ ಮಾಡುವುದಾಗಿ ಹೇಳಿ ಬೆಲೆ ಏರಿಕೆ ಮೂಲಕ ಕೃಷಿ ವೆಚ್ಚವನ್ನು ದ್ವಿಗುಣವಾಗುವಂತೆ ಮಾಡಿದ್ದಾರೆ. ಫಸಲ್ ಬಿಮಾ ಹೆಸರಿನಲ್ಲಿ ರೈತರ ಜೇಬಿನಿಂದ ಹಣ ಕಿತ್ತು ಕಾರ್ಪೋರೇಟ್ ಕಂಪನಿಗೆ ಲಾಭವಾಗುವಂತೆ ಮಾಡಿದ್ದಾರೆ. 2019ರಿಂದ ಯಾವುದೇ ರೈತರಿಗೆ ಸರಿಯಾದ ಪರಿಹಾರ ಕೊಡಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂವಿಧಾನ ಉಳಿಯಬೇಕು, ಶ್ರಮಜೀವಿ ಬಡವರು ಉಳಿಯಬೇಕು. ಎನ್‌ಡಿಎ ಮೈತ್ರಿಕೂಟ ಸೋಲಿಸಬೇಕು ಎಂಬ ಘೋಷವಾಕ್ಯದೊಂದಿಗೆ ಇಡೀ ರಾಜ್ಯಾದ್ಯಂತ ಮನೆಗೊಂದು ಕರಪತ್ರ ನೀಡಿ ಅಭಿಯಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕಿರಣ್ ಪೂಣಚ್ಚ, ಜಿಲ್ಲಾಧ್ಯಕ್ಷ ಗುರುಶಾಂತಪ್ಪ, ರಾಜ್ಯ ಸಮಿತಿ ಸದಸ್ಯ ಎಂ.ಸಿ.ಬಸವರಾಜ್, ಪ್ರಮುಖರಾದ ಕೆ.ಕೆ.ಕೃಷ್ಣೇಗೌಡ, ಆನಂದ್, ಮಹೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net