More

    ಕಾಗೋಡು ರೈತ ಹೋರಾಟ ಅವಿಸ್ಮರಣೀಯ

    ಸಾಗರ: ಮಲೆನಾಡು ಭಾಗದ ಗೇಣಿ ರೈತರ ಧ್ವನಿಯಾಗಿದ್ದು ಕಾಗೋಡು ಸತ್ಯಾಗ್ರಹ. ಉಳುವವನೇ ಹೊಲದೊಡೆಯ ಘೋಷವಾಕ್ಯದ ಮೂಲಕ ಕಾಗೋಡು ಚಳವಳಿ ದೇಶಾದ್ಯಂತ ಮನೆಮಾತಾಗಿತ್ತು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ ಹೇಳಿದರು.

    ನಗರದಲ್ಲ ಗುರುವಾರ ರೈತ ಭವನದಲ್ಲಿ ಶಿವಮೊಗ್ಗ ಜಿಲ್ಲಾ ರೈತ ಸಂಘ (ಡಾ. ಎಚ್.ಗಣಪತಿಯಪ್ಪ ಬಣ) ದಿಂದ ಆಯೋಜಿಸಿದ್ದ 73ನೇ ಕಾಗೋಡು ರೈತ ಚಳವಳಿ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
    ಜಮೀನುದಾರರ ಗೇಣಿ ಪದ್ಧತಿ ವಿರುದ್ಧ ಸಿಡಿದೆದ್ದ ಡಾ. ಎಚ್.ಗಣಪತಿಯಪ್ಪ ಮಲೆನಾಡು ರೈತ ಸಂಘವನ್ನು ಕಟ್ಟಿಕೊಂಡು ತನ್ಮೂಲಕ ರೈತ ಹೋರಾಟಕ್ಕೆ ಕರೆ ನೀಡಿದ್ದರು. ದೇವರಾಜ ಅರಸು ಮುಖ್ಯಮಂತ್ರಿಗಳಾಗಿದ್ದ ಸಂದರ್ಭ ಭೂಸುಧಾರಣಾ ಕಾಯ್ದೆ ಜಾರಿಗೆ ಬರುವ ಮೂಲಕ ಗೇಣಿ ರೈತರು ಭೂಮಿ ಹಕ್ಕು ಪಡೆಯುವಂತಾಯಿತು. ಕಾಗೋಡು ಚಳವಳಿ ಈಗಿನ ಪೀಳಿಗೆಯವರಿಗೆ ಗೊತ್ತಿಲ್ಲ. ಇದನ್ನು ತಿಳಿಸಿಕೊಡುವ ಕೆಲಸ ಮಾಡಬೇಕು ಎಂದರು.
    ಲೋಕಸಭಾ ಚುನಾವಣೆಯಲ್ಲಿ ನಮ್ಮ ರೈತ ಸಂಘ ಯಾವುದೇ ಪಕ್ಷ ಅಥವಾ ವ್ಯಕ್ತಿಗೆ ಬೆಂಬಲ ನೀಡುತ್ತಿಲ್ಲ. ಜತೆಗೆ ಯಾರಿಗೂ ಚುನಾವಣೆ ಬಹಿಷ್ಕಾರಕ್ಕೂ ಕರೆ ನೀಡುವುದಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಮಗೆ ಮತದಾನದ ಅವಕಾಶ ಸಿಕ್ಕಿದೆ. ಅದನ್ನು ಸದ್ಬಳಕೆ ಮಾಡಿಕೊಳ್ಳೋಣ ಎಂದರು.
    ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ರಮೇಶ್ ಕೆಳದಿ ಮಾತನಾಡಿ, ಕಾಗೋಡು ಸತ್ಯಾಗ್ರಹ ಯಶಸ್ವಿಯಾಗಲು ಡಾ. ಎಚ್.ಗಣಪತಿಯಪ್ಪ ಅವರ ಪಾತ್ರ ಪ್ರಮುಖ. ಯಾವುದೇ ಸಂಪರ್ಕ, ಸಾರಿಗೆ ವ್ಯವಸ್ಥೆ ಇಲ್ಲದ ಕಾಲಘಟ್ಟದಲ್ಲಿ ದೊಡ್ಡ ಪ್ರಮಾಣದಲ್ಲಿ ರೈತರನ್ನು ಸಂಘಟಿಸಿ ಹೋರಾಟಕ್ಕೆ ಸಜ್ಜುಗೊಳಿಸಿದ ಹೆಗ್ಗಳಿಕೆ ಗಣಪತಿಯಪ್ಪ ಅವರದು. ಏ.18 ಗೇಣಿ ರೈತರ ಪಾಲಿಗೆ ಅವಿಸ್ಮರಣೀಯ ದಿನ. ಹಿಂದಿನ ಹೋರಾಟಗಳನ್ನು ನೆನಪಿಸಿಕೊಂಡು ನಾವು ಮುನ್ನಡೆಯಬೇಕು ಎಂದು ತಿಳಿಸಿದರು.
    ಮಹೇಶ್ ಗೌಡ ಶಿರವಂತೆ ಅವರನ್ನು ಸನ್ಮಾನಿಸಲಾಯಿತು. ಡಾ. ರಾಮಚಂದ್ರಪ್ಪ ಮನೆಘಟ್ಟ, ಹೊಯ್ಸಳ ಗಣಪತಿಯಪ್ಪ, ಕುಮಾರ ಗೌಡ, ಕೃಷ್ಣಮೂರ್ತಿ, ಶಿವು ಮೈಲಾರಿಕೊಪ್ಪ, ಚಂದ್ರು ಪೂಜಾರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts