More

    ರೈತ ಸಂಘವು ಅಕ್ರಮ ಕೂಟ ಎಂದು ಎಫ್‌ಐಆರ್

    ಸಾಗರ: ರೈತರ ನ್ಯಾಯಯುತ ಬೇಡಿಕೆ ಈಡೇರಿಸುವಂತೆ ನಡೆಸುವ ಪ್ರತಿಭಟನೆಯನ್ನು ಅಕ್ರಮ ಕೂಟ ಎಂದು ಪೊಲೀಸ್ ಇಲಾಖೆ ಕರೆದಿರುವುದು ಬೇಸರದ ಸಂಗತಿ. ಅಕ್ರಮ ಕೂಟ ಎನ್ನುವ ಮೂಲಕ ರೈತ ಸಂಘವನ್ನೇ ಅಕ್ರಮ ಎನ್ನಲಾಗಿದೆ ಎಂದು ರೈತ ಸಂಘದ ( ಡಾ. ಎಚ್.ಗಣಪತಿಯಪ್ಪ ಬಣ) ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ ದೂರಿದರು.

    ಪೊಲೀಸ್ ಇಲಾಖೆಯ ಕ್ರಮವನ್ನು ಖಂಡಿಸಿ ರೈತ ಸಂಘವು ಖಂಡನಾ ಸಭೆ ನಡೆಸಲಿದೆ. ಮೂರು ವರ್ಷಗಳಿಂದ ರೈತ ಸಂಘ ವಿವಿಧ ಬೇಡಿಕೆ ಇರಿಸಿಕೊಂಡು ಹೋರಾಟ ನಡೆಸುತ್ತಿದೆ. ಬೇಡಿಕೆ ಈಡೇರದ ಹಿನ್ನೆಲೆಯಲ್ಲಿ ಮಾ.12ರಂದು ಅಹೋರಾತ್ರಿ ಧರಣಿ ಹಮ್ಮಿಕೊಳ್ಳಲಾಗಿತ್ತು. ಇದರ ಪ್ರಮುಖ ಉದ್ದೇಶ ಮಾ.13ರಂದು ನೂತನ ಆಡಳಿತ ಸೌಧ ಉದ್ಘಾಟನೆಗೆ ಬರುವ ಸಚಿವರು, ಶಾಸಕರು, ಜಿಲ್ಲಾಧಿಕಾರಿ ನಮ್ಮ ಬೇಡಿಕೆ ಆಲಿಸುತ್ತಾರೆ ಎನ್ನುವುದಾಗಿತ್ತು. ಆದರೆ ಪೊಲೀಸರು 13ರಂದು ಮುಂಜಾನೆ 5ಗಂಟೆಗೆ ನಮ್ಮನ್ನೆಲ್ಲ ವಶಕ್ಕೆ ಪಡೆದಿದ್ದಾರೆ. ನಮ್ಮ ಬಂಧನದ ಹಿಂದೆ ರಾಜಕೀಯ ದುರುದ್ದೇಶವಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
    ನನ್ನನ್ನು ಕಾರ್ಗಲ್ ಠಾಣೆಯಲ್ಲಿ ಬಂಧನದಲ್ಲಿ ಇರಿಸಲಾಗಿತ್ತು. ಜಿಲ್ಲಾಧಿಕಾರಿಗಳು ಕಾರ್ಗಲ್ ಠಾಣೆಗೆ ಬಂದು ನಮ್ಮ ಸಮಸ್ಯೆ ಕೇಳುವ ಬದಲು ಜೋಗ ಪ್ರವಾಸಿ ಮಂದಿರಕ್ಕೆ ಬರಲು ಹೇಳಿದ್ದಾರೆ. ಅದಕ್ಕೆ ನಾವು ಸಮ್ಮತಿಸಿಲ್ಲ. ಹಾಗಾಗಿ ಜಿಲ್ಲಾಧಿಕಾರಿ ಸಮಸ್ಯೆ ಕೇಳದೆ ಸಾಗರಕ್ಕೆ ವಾಪಸ್ ಹೋಗಿದ್ದರು. ಅಂದು ಮಧ್ಯಾಹ್ನ 3 ಗಂಟೆಗೆ ನಾವು ರಾಷ್ಟ್ರೀಯ ಹೆದ್ದಾರಿ-206ರಲ್ಲಿ ಪ್ರತಿಭಟನೆ ಮಾಡಿದಾಗ ನಮ್ಮ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ರೈತ ಸಂಘವನ್ನು ಅಕ್ರಮ ಕೂಟ ಎಂದು ಎಫ್‌ಐಆರ್‌ನಲ್ಲಿ ನಮೂದಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
    ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ರಮೇಶ್ ಕೆಳದಿ ಮಾತನಾಡಿ, ತಾಲೂಕಿನಲ್ಲಿ ಅಸಮರ್ಪಕ ವಿದ್ಯುತ್ ಸೇವೆ ಮತ್ತು ರೈತ ಸಂಘವನ್ನು ಅಕ್ರಮ ಕೂಟ ಎಂದು ಕರೆದಿರುವುದರ ವಿರುದ್ಧ ಹೋರಾಟ ಹಮ್ಮಿಕೊಳ್ಳುವ ಚಿಂತನೆ ನಡೆಸಲಾಗಿದೆ ಎಂದರು.
    ಭದ್ರೇಶ್ ಬಾಳಗೋಡು, ಜಿನಿಸ್ ಕುಮಾರ್, ಡಾ. ರಾಮಚಂದ್ರಪ್ಪ ಮನೆಘಟ್ಟ, ಚಂದ್ರಪ್ಪ ಆಲಳ್ಳಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts