ಜಿಲ್ಲೆ

ವಿಷ ಕುಡಿಸಿದ ಬಳಿಕ ಯುವತಿಯನ್ನು ಸುಟ್ಟು ಹಾಕಿ ಮರ್ಯಾದೆ ಹತ್ಯೆ ಆರೋಪ: ಏಳು ಮಂದಿ ಬಂಧನ

ವಿಜಯನಗರ: ಜಿಲ್ಲೆಯಲ್ಲಿ ಮರ್ಯಾದೆ ಹತ್ಯೆ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಸಾಕ್ಷಿ ನಾಶ ಮಾಡಿರುವ ಆರೋಪದ ಮೇಲೆ ಏಳು ಮಂದಿಯನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ.

ಹರಪನಹಳ್ಳಿ ತಾಲೂಕಿನ ಯಡಿಹಳ್ಳಿ ಗ್ರಾಮದಲ್ಲಿ 17 ವರ್ಷದ ಬಾಲಕಿ ಮತ್ತು ಆಕೆಯ ಮನೆ ಮುಂದಿನ ಮನೆಯ ಯುವಕ ಇಬ್ಬರೂ ಮೂರು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇದಕ್ಕೆ ಯುವತಿಯ ಮನೆಯವರ ವಿರೋಧ ವ್ಯಕ್ತವಾಗಿದ್ದರಿಂದ ಈ ಹಿಂದೆ ವಿಷ ಕುಡಿದಿದ್ದಳಂತೆ. ಪ್ರಥಮ ಪಿಯುಸಿ ಓದುತ್ತಿದ್ದ ಈಕೆ ಮೂರು ದಿನದ ಹಿಂದೆ ಪ್ರಿಯಕರನೊಂದಿಗೆ ಮನೆ ಬಿಟ್ಟು ಓಡಿ ಹೋಗಿದ್ದಳು. ಮದುವೆ ಮಾಡಿಕೊಳ್ಳವ ಆಸೆಯಲ್ಲಿ ಇಬ್ಬರೂ ಪಕ್ಕದ ಗ್ರಾಮದಲ್ಲಿ ತಂಗಿದ್ದರು.

ಈ ವಿಷಯ ತಿಳಿದು ಅಲ್ಲಿಗೆ ಹೋಗಿದ್ದ ಬಾಲಕಿ ಕಡೆಯವರು ಪ್ರೇಮಿಗಳಿಬ್ಬರನ್ನೂ ಗ್ರಾಮಕ್ಕೆ ಕರೆತಂದಿದ್ದರು. ಪ್ರಾಣ ಭಯದಿಂದ ಪ್ರಿಯಕರ ಊರುಬಿಟ್ಟಿದ್ದಾನೆ. ಇತ್ತ ಹುಡುಗಿ ಯಾವುದೇ ಕಾರಣಕ್ಕೂ ಪ್ರಿಯಕರನನ್ನು ಬಿಟ್ಟು ಬದುಕುವುದಿಲ್ಲ ಎಂದು ಪಟ್ಟು ಹಿದಿಡಿದ್ದಳು. ಆದರೀಗ ಆಕೆ ಬದುಕಿಲ್ಲ.

ಅಪ್ರಾಪ್ತೆ ಕಡೆಯವರು ನಿನ್ನೆ(ಮಂಗಳವಾರ) ರಾತ್ರಿ 10.30ರ ವೇಳೆಗೆ ಆಕೆಗೆ ಬಲವಂತವಾಗಿ ವಿಷವುಣಿಸಿ ಆಸ್ಪತ್ರೆಗೆ ಕರೆದೊಯ್ಯುವ ನೆಪದಲ್ಲಿ ಗ್ರಾಮದ ಹೊರಕ್ಕೆ ಕರೆದೊಯ್ದು ಅಲ್ಲಿಯೇ ಕೊಲೆ ಮಾಡಿ ರಾತ್ರೋರಾತ್ರಿ ಸುಟ್ಟು ಹಾಕಿದ್ದಾರೆ ಎಂಬ ಗಂಭಿರ ಆರೋಪ ಕೇಳಿಬಂದಿದೆ. ಈ ವೇಳೆ ಬಾಲಕಿಯ ತಂದೆ- ತಾಯಿಯನ್ನು ಬಲವಂತವಾಗಿ ಮನೆಯಲ್ಲೇ ಕೂಡಿ ಹಾಕಿದ್ದರು ಎನ್ನಲಾಗಿದೆ. ಇಡೀ ಘಟನೆಯನ್ನ ಅವಲೋಕಿಸಿದರೆ ಇದು ಮರ್ಯಾದಾ ಹತ್ಯೆ ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಅತ್ತ ಈ ಪ್ರಕರಣವನ್ನು ಮುಚ್ಚಿ ಹಾಕಿಸುವ ಪ್ರಯತ್ನವೂ ನಡೆಯುತ್ತಿದೆ.

ಅಪ್ರಾಪ್ತೆ ಬಾಲಕಿ ವಿಷ ಸೇವಿಸಿ ಸತ್ತಿದ್ದಾಳೆ. ಶವಪರೀಕ್ಷೆ ಮಾಡದೆ ಕುಟುಂಬಸ್ಥರು ಬಾಲಕಿ ದೇಹವನ್ನ ಸುಟ್ಟಿದ್ದಾರೆ. ಈಗಾಗಲೇ ಬೇರೊಬ್ಬ ಹುಡುಗನೊಂದಿಗೆ ಎಂಗೇಜ್​ಮೆಂಟ್ ಕೂಡ ಆಕೆಗೆ ಆಗಿತ್ತು. ಅಷ್ಟರೊಳಗೆ ಈ ಬಾಲಕಿ ಪ್ರಿಯಕರನೊಂದಿಗೆ ಓಡಿ ಹೋಗಿದ್ದಾಳೆ. ಅವರಿಬ್ಬರನ್ನೂ ಕರೆತಂದು ಬುದ್ಧಿ ಹೇಳಿ ಅವರವರ ಮನೆಗೆ ಗ್ರಾಮಸ್ಥರು ಕಳಿಸಿಕೊಟ್ಟಿದ್ದರು. ಅಷ್ಟರಲ್ಲೇ ಈ ಘಟನೆ ನಡೆದು ಹೋಗಿಬಿಟ್ಟಿದೆ ಎಂದು ಹರಪನಹಳ್ಳಿ ಡಿವೈಎಸ್ಪಿ ಹಾಲಮೂರ್ತಿ ರಾವ್ ತಿಳಿಸಿದ್ದಾರೆ.

ಪೂಜಾಳಿಗೆ ವಿಷ ಕುಡಿಸಿ ಕೆರೆ ಬಳಿ ಸುಟ್ಟು ಹಾಕಿದ್ದಾರೆ ಎಂದು ಶಂಕೆ ವ್ಯಕ್ತವಾಗಿದ್ದು, ಸಾಕ್ಷಿ ನಾಶ ಮಾಡಿರುವ ಆರೋಪದಡಿ ಏಳು ಜನರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. (ದಿಗ್ವಿಜಯ ನ್ಯೂಸ್​)