

ಗುಂಟೂರು: ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ಚುಂಡೂರು ಠಾಣೆಯ ಸಬ್ಇನ್ಸ್ಪೆಕ್ಟರ್ ಶ್ರಾವಣಿ (35) ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲೇ ಕೊನೆಯುಸಿರೆಳಿದಿದ್ದಾರೆ.
ರವೀಂದ್ರ ಎಂಬ ಕಾನ್ಸ್ಟೇಬಲ್ ಜತೆ ಶ್ರಾವಣಿ ಕಳೆದ ಶನಿವಾರ ಆತ್ಮಹತ್ಯೆಗೆ ಯತ್ನಿಸಿದ್ದರು. ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಾಲ್ಕೈದು ದಿನಗಳಿಂದ ಸಾವು-ಬದುಕಿನ ನಡುವೆ ಹೋರಾಡಿದ ಶ್ರಾವಣಿ ಬುಧವಾರ ಬೆಳಗ್ಗೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಪ್ರಕಾಶಂ ಜಿಲ್ಲೆಯ ಕಂದುಕುರ್ ಮೂಲದ ಶ್ರಾವಣಿ 2018ರಲ್ಲಿ ಸಬ್ಇನ್ಸ್ಪೆಕ್ಟರ್ ಸ್ಥಾನಕ್ಕೇರಿದರು. ತರಬೇತಿಯ ಬಳಿಕ ನರಸರಾವ್ಪೇಟೆಯ ದಿಶಾ ಪೊಲೀಸ್ ಠಾಣೆಗೆ ಮೊದಲ ಪೋಸ್ಟಿಂಗ್ ಆಯಿತು. ಏಳು ತಿಂಗಳ ಹಿಂದೆ ಶ್ರಾವಣಿ ಚುಂಡೂರು ಠಾಣೆಗೆ ವರ್ಗಾವಣೆ ಆಗಿದ್ದರು.
ಆತ್ಮಹತ್ಯೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಆದರೆ, ಮೂಲಗಳ ಪ್ರಕಾರ ಇಬ್ಬರ ನಡುವೆ ವಿವಾಹೇತರ ಸಂಬಂಧ ಇತ್ತೆಂದು ಹೇಳಲಾಗಿದೆ. ಇದು ಗೊತ್ತಾಗಿ ರವೀಂದ್ರ ಪತ್ನಿ, ಉನ್ನತ ಅಧಿಕಾರಿಗಳಿಗೆ ದೂರು ನೀಡಿದ್ದರು. ಇದಾದ ಬಳಿಕ ರವೀಂದ್ರನನ್ನು ಬೇರೆಡೆಗೆ ವರ್ಗಾವಣೆ ಮಾಡಲಾಗಿತ್ತು.
ಈ ಮಧ್ಯೆ ರವೀಂದ್ರ ವಿಷ ಕುಡಿಯುತ್ತಿರುವ ವಿಡಿಯೋವನ್ನು ಎಸ್ಐ ಶ್ರಾವಣಿಗೆ ಕಳುಹಿಸಿದ್ದ ಎಂದು ತಿಳಿದುಬಂದಿದೆ. ಇದನ್ನು ನೋಡಿ ಶ್ರಾವಣಿ, ರವೀಂದ್ರ ಇದ್ದ ಸ್ಥಳಕ್ಕೆ ತೆರಳಿದ್ದಾಳೆ. ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದು ತಾಳ್ಮೆ ಕಳೆದುಕೊಂಡ ಶ್ರಾವಣಿ ಸಹ ವಿಷ ಕುಡಿದಿದ್ದಾರೆ ಎನ್ನಲಾಗಿದೆ.
ಇದನ್ನು ಗಮನಿಸಿದ ಸ್ಥಳೀಯರು ತಕ್ಷಣ ಇಬ್ಬರನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ, ಶ್ರಾವಣಿ ಬುಧವಾರ ಬೆಳಗ್ಗೆ ಮೃತಪಟ್ಟರೆ, ರವೀಂದ್ರ ಇನ್ನು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. (ಏಜೆನ್ಸೀಸ್)