ಬೆಂಗಳೂರು: ವಿಧಾನಪರಿಷತ್ಗೆ ಸ್ಥಳೀಯ ಸಂಸ್ಥೆಗಳ 25 ಸ್ಥಾನಗಳಿಗೆ ನಡೆಯುವ ಚುನಾವಣೆಯ ಮತದಾನ ಇಂದು ಬೆಳಗ್ಗೆ 8 ಗಂಟೆಗೆ ಆರಂಭವಾಗಿದ್ದು, 90 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.
ಮತದಾನ ಆರಂಭಕ್ಕೂ ಮುನ್ನ ಮಾಜಿ ಸಚಿವ ರೇವಣ್ಣ ಪೂಜೆ
ವಿಧಾನರಿಷತ್ ಚುನಾವಣೆಗೆ ಮತದಾನ ಆರಂಭಕ್ಕೂ ಮುನ್ನವೇ ಮಾಜಿ ಸಚಿವ ಎಚ್.ಡಿ. ರೇವಣ್ಣ ಪೂಜೆ ನೆರವೇರಿಸಿದರು. ಅಪ್ಪನ ನಂತರ ಜೆಡಿಎಸ್ ಅಭ್ಯರ್ಥಿ ಸೂರಜ್ ರೇವಣ್ಣ ಲಕ್ಷ್ಮಿ ನರಸಿಂಹ ದೇವಾಲಯದಲ್ಲಿ ಪೂಜೆ ನೆರವೇರಿಸಿದರು. ಸೂರಜ್ ಇದೇ ಮೊದಲ ಬಾರಿಗೆ ರಾಜ್ಯ ರಾಜಕಾರಣಕ್ಕೆ ಎಂಟ್ರಿ ಕೊಡುತ್ತಿದ್ದಾರೆ.
ಈ ಚುನಾವಣೆಯಲ್ಲಿ ಶತಾಯ-ಗತಾಯ ಗೆಲುವು ಸಾಧಿಸಲು ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಕೊನೇ ಕ್ಷಣದಲ್ಲಿ ತೀವ್ರ ಕಸರತ್ತು ನಡೆಸಿವೆ. ಮಹಿಳಾ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಮೇಲ್ಮನೆಯಲ್ಲಿ ಸಂಖ್ಯಾಬಲ ಹೆಚ್ಚಿಸಿಕೊಳ್ಳಲು ರಾಜಕೀಯ ಪಕ್ಷಗಳು ಪ್ರಯತ್ನ ಮಾಡುತ್ತಿವೆ.
20 ಕ್ಷೇತ್ರಗಳಲ್ಲಿ ಮೈಸೂರು, ಮಂಗಳೂರು, ಧಾರವಾಡ, ವಿಜಯಪುರ ಹಾಗೂ ಬೆಳಗಾವಿಯಲ್ಲಿ ದ್ವಿಸದಸ್ಯ ಸ್ಥಾನಗಳಿವೆ. ಉಳಿದ ಕಡೆ ಒಂದು ಸ್ಥಾನ ಮಾತ್ರ ಇದೆ. ಕಾಂಗ್ರೆಸ್ ಹಾಗೂ ಬಿಜೆಪಿ ತಲಾ 20 ಸ್ಥಾನಗಳಿಗೆ ಸ್ಪರ್ಧಿಸಿದ್ದರೆ, ಜೆಡಿಎಸ್ ಕೇವಲ 6 ಕಡೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಬೆಳಗಾವಿ, ಧಾರವಾಡ ಹಾಗೂ ವಿಜಯಪುರದಲ್ಲಿ ಮಾತ್ರ ಪಕ್ಷೇತರ ಅಭ್ಯರ್ಥಿಗಳು ಗಮನ ಸೆಳೆದಿದ್ದಾರೆ. ಆರು ಕ್ಷೇತ್ರಗಳಲ್ಲಿ ಜೆಡಿಎಸ್ ಬಿಟ್ಟರೆ ಉಳಿದೆಡೆ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರ ಹಣಾಹಣಿ ನಡೆದಿದೆ. ಚಿಕ್ಕಮಗಳೂರಿನಿಂದ ಸ್ಪರ್ಧಿಸಿರುವ ಕಾಂಗ್ರೆಸ್ನ ಗಾಯತ್ರಿ ಶಾಂತೇಗೌಡ ಏಕೈಕ ಮಹಿಳಾ ಅಭ್ಯರ್ಥಿಯಾಗಿದ್ದಾರೆ.
ಇಂದು 8 ಗಂಟೆಗೆ ಆರಂಭವಾಗಿರುವ ಮತದಾನ ಸಂಜೆ 4 ಗಂಟೆಗೆ ಮುಕ್ತಾಯವಾಗಲಿದೆ. ರಾಜ್ಯಾದ್ಯಂತ 6072 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಮತಗಟ್ಟೆಗಳಲ್ಲಿ ಹೆಚ್ಚಿನ ಬಂದೋಬಸ್ತ್ ಮಾಡಲಾಗಿದೆ. ಶಾಂತಿಯುತ ಮತದಾನಕ್ಕಾಗಿ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿದ್ದು, ಬಂದೋಬಸ್ತ್ಗಾಗಿ ಎಲ್ಲ ಮತಗಟ್ಟೆಗಳಲ್ಲೂ ಪೊಲೀಸರನ್ನು ನಿಯೋಜಿಸಲಾಗಿದೆ. ಮತಗಟ್ಟೆಯ ಸುತ್ತ 200 ಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.