ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿರುವ ವಿಧಾನ ಪರಿಷತ್ತಿನ 25 ಸ್ಥಾನಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಇಂದು ಬೆಳಗ್ಗೆ 8 ಗಂಟೆಗೆ ಆರಂಭವಾಗಿದೆ.
ಡಿ.10 ರಂದು 20 ಕ್ಷೇತ್ರಗಳ 25 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಇಂದು ಬೆಳಗ್ಗೆ 8 ರಿಂದ ಮತ ಎಣಿಕೆ ಆರಂಭವಾಗಿದ್ದು, ಅಭ್ಯರ್ಥಿಗಳಿಗಷ್ಟೇ ಅಲ್ಲ, ರಾಜಕೀಯ ಪಕ್ಷಗಳಿಗೂ ಈ ಚುನಾವಣೆ ಫಲಿತಾಂಶ ಕಾತರತೆ ಹೆಚ್ಚಿಸಿದೆ. ಕೋಟಿ ಕೋಟಿ ರೂಪಾಯಿ ಖರ್ಚು ಮಾಡಿರುವ ಅಭ್ಯರ್ಥಿಗಳ ಎದೆಯಲ್ಲಿ ನಡುಕ ಶುರುವಾಗಿದ್ದರೆ, ರಾಜಕೀಯ ಪಕ್ಷಗಳಿಗೆ ಗೆಲುವು ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಮತಎಣಿಕೆಯ ಕ್ಷಣದ ಕ್ಷಣದ ಮಾಹಿತಿಯನ್ನು ಈ ಕಳಗಿನ ದಿಗ್ವಿಜಯ ನ್ಯೂಸ್ ಫೇಸ್ಬುಕ್ ನೇರಪ್ರಸಾರದಲ್ಲಿ ಕಾಣಬಹುದಾಗಿದೆ.
51,450 ಪುರುಷ ಹಾಗೂ 55,136 ಮಹಿಳೆಯರು 1 ಇತರೆ ಸೇರಿದಂತೆ 1,06,587 ಮತದಾರರು ಈ ಚುನಾವಣೆಯಲ್ಲಿ ಮತ ಚಲಾಯಿಸಿದ್ದು, ಶೇ. 99.60 ದಾಖಲೆಯ ಮತದಾನವಾಗಿತ್ತು. ಬೆಳಗಾವಿ ,ಚಿತ್ರದುರ್ಗ, ಬೆಂಗಳೂರು ನಗರ, ದಕ್ಷಿಣ ಕನ್ನಡ, ಮಂಡ್ಯ, ಕೋಲಾರ ಮತ್ತು ಮೈಸೂರು ಜಿದ್ದಾಜಿದ್ದಿನ ಕಣವಾಗಿದ್ದವು. ಬಿಜೆಪಿ, ಕಾಂಗ್ರೆಸ್ ತಲಾ 20, ಜೆಡಿಎಸ್ 6 ಸೇರಿದಂತೆ ಒಟ್ಟು 90 ಅಭ್ಯರ್ಥಿಗಳು ಈ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಚುನಾವಣೆ ನಡೆದ ಎಲ್ಲ 20 ಜಿಲ್ಲೆಗಳಲ್ಲೂ ಮತ ಎಣಿಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
ಪ್ರಾಶಸ್ತ್ಯ ಮತಗಳ ವಿಭಿನ್ನ ಚುನಾವಣೆ ಇದಾಗಿರುವುದರಿಂದ ಮತ ಎಣಿಕೆ ವಿಳಂಬವಾಗುವ ಸಾಧ್ಯತೆಗಳಿವೆ. ಮೊದಲ ಪ್ರಾಶಸ್ತ್ಯ ಮತಗಳಲ್ಲೇ ಗೆಲ್ಲುವ ಸಂದರ್ಭಗಳಿದ್ದರೆ ಮಧ್ಯಾಹ್ನದ ವೇಳೆಗೆ ಫಲಿತಾಂಶ ಪ್ರಕಟವಾಗಲಿದೆ. 2, 3 ಹೀಗೆ ಪ್ರಾಶಸ್ತ್ಯ ಮತ ಎಣಿಕೆ ನಡೆದರೆ ಹಲವು ಕಡೆ ತಡೆ ರಾತ್ರಿಯವರೆಗೆ ಎಣಿಕೆ ನಡೆಯುವ ಸಾಧ್ಯತೆಗಳಿವೆ. ದ್ವಿ ಸದಸ್ಯ ಕ್ಷೇತ್ರಗಳಲ್ಲಂತೂ ಎರಡನೇ ಪ್ರಾಶಸ್ತ್ಯದ ಮತ ಎಣಿಕೆ ನಡೆಯಲೇಬೇಕಿರುವುದರಿಂದ ಮೈಸೂರು, ಬೆಳಗಾವಿ, ಧಾರವಾಡ, ದಕ್ಷಿಣ ಕನ್ನಡ, ವಿಜಯಪುರ ಜಿಲ್ಲೆಗಳ ಮತ ಎಣಿಕೆ ಸಾಮಾನ್ಯವಾಗಿ ವಿಳಂಬವಾಗುತ್ತದೆ.