More

    ಸರ್ವೆಗೆ ಬಂದಿದೆ ದಿಶಾಂಕ್: ಸರ್ವೆಯರ್ ಬದಲಿಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳಿಂದ ನಕ್ಷೆ

    | ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು

    ಗ್ರಾಮ ಠಾಣಾ ಒಳಗಿರುವ ಸೈಟು, ಮನೆ, ಆಸ್ತಿಗಳ ಸರ್ವೆ ನಕ್ಷೆಗೆ (ಮೋಜಣಿ) ಸರ್ವೆಯರ್ ಬೇಕಿಲ್ಲ. ಕೇವಲ ದಿಶಾಂಕ್ ಆಪ್​ನಲ್ಲಿ ಗ್ರಾಮ ಪಂಚಾಯಿತಿ ಅಧಿಕಾರಿಗಳೇ ಸರ್ವೆ ನಡೆಸಿ ಇ-ಸ್ವತ್ತು ತಂತ್ರಾಂಶದಲ್ಲಿ ಇ-ಖಾತಾ ಕೊಡಬಹುದು. ಇಂತಹ ವಿನೂತನ ಯೋಜನೆಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಕಂದಾಯ ಇಲಾಖೆ ಜಂಟಿಯಾಗಿ ಆರಂಭಿಸಿವೆ. ಗ್ರಾಮ ಠಾಣಾ ಒಳಗಿನ ಆಸ್ತಿಗಳಿಗೆ ತೆರಿಗೆ ನಿರ್ಧಾರ ಮಾಡಲು ಗ್ರಾಮ ಪಂಚಾಯಿತಿಗಳು ಇ-ಸ್ವತ್ತು ತಂತ್ರಾಂಶದಲ್ಲಿ ನಮೂನೆ-9 ಮತ್ತು 11ಎ, 11ಬಿ ಅನ್ವಯ ಇ-ಖಾತಾ ನೀಡುತ್ತಿವೆ.

    ಆಸ್ತಿ ಮಾಲೀಕ ಇ-ಖಾತಾಗೆ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿದರೆ ಭೂಮಾಪನ ಇಲಾಖೆ ಸರ್ವೆಯರ್ ಬಂದು ನಕ್ಷೆ ಸಿದ್ಧಪಡಿಸಿ ಮೋಜಣಿ ತಂತ್ರಾಂಶದಲ್ಲಿ ಅಪ್​ಲೋಡ್ ಮಾಡಿ ಆನಂತರ ಇ-ಸ್ವತ್ತು ತಂತ್ರಾಂಶದಲ್ಲಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಇ-ಖಾತಾ ನೀಡುತ್ತಿದ್ದರು. ಆದರೆ, ಇದೀಗ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಅಥವಾ ದ್ವಿತೀಯ ದರ್ಜೆ ಲೆಕ್ಕ ಸಹಾಯಕರು ಸ್ಥಳಕ್ಕೆ ತೆರಳಿ ಗ್ರಾಮ ಠಾಣಾ ವ್ಯಾಪ್ತಿಗೆ ಬರುತ್ತದೆಯೇ ಎಂದು ಖಚಿತಪಡಿಸಿಕೊಂಡು ಅರ್ಜಿದಾರನಿಂದ ಫೋಟೋ, ಐಡಿ  ಕಾರ್ಡ್, ವಿಳಾಸ, ಆಸ್ತಿಯ ಚಕ್ಕುಬಂದಿ, ವಿಸ್ತೀರ್ಣ ದಾಖಲಿಸಬೇಕು. ಈ ಎಲ್ಲ ಅಂಶವನ್ನು ಅರ್ಜಿದಾರನಿಂದ ಖಾತರಿಪಡಿಸಿಕೊಂಡು ಇ-ಸ್ವತ್ತು ತಂತ್ರಾಂಶಕ್ಕೆ ಅಪ್​ಡೇಟ್ ಮಾಡಿ ದಿಶಾಂಕ್ ಆಪ್​ಗೆ ವರ್ಗಾವಣೆ ಮಾಡಬೇಕು.

    ಆನಂತರ ಕಾರ್ಯದರ್ಶಿ ಅಥವಾ ಎಸ್​ಡಿಎ ಲೆಕ್ಕ ಸಹಾಯಕರು ಖುದ್ದು ಸ್ಥಳಕ್ಕೆ ಭೇಟಿ ಕೊಟ್ಟು ದಿಶಾಂಕ್​ನಲ್ಲಿ ಆಸ್ತಿ ಪ್ರತಿಯೊಂದು ಮೂಲೆಯನ್ನು ಜಿಪಿಎಸ್ ಪರಿಶೀಲನೆ ನಡೆಸಿ ಫೋಟೋ ಸೆರೆಹಿಡಿಯಬೇಕು. ಇದರಿಂದ ಆಸ್ತಿ ಗ್ರಾಮ ಠಾಣಾ ಒಳಗೆ ಅಥವಾ ಹೊರಗೆ ಇದೆಯೇ ಎಂಬುದು ಗೊತ್ತಾಗಲಿದೆ. ಗ್ರಾಮ ಠಾಣಾ ವ್ಯಾಪ್ತಿಯಲ್ಲಿ ಆಸ್ತಿ ಇದ್ದರೆ ದಿಶಾಂಕ್ ಆಪ್ ಲಾಗಿನ್ ಆಗಿ ಪಿಡಿಒ ದೃಢೀಕರಿಸಿ ಇ-ಸ್ವತ್ತು ತಂತ್ರಾಂಶಕ್ಕೆ ವರ್ಗಾವಣೆ ಮಾಡಿಕೊಂಡು ಇ-ಖಾತಾ ನೀಡಬಹುದು. ಗ್ರಾಮ ಪಂಚಾಯಿತಿಯಲ್ಲಿ ಸರ್ವೆ ಮಾಡಿ ದೃಢೀಕರಿಸಿದ ಶೇ.10 ಆಸ್ತಿಗಳನ್ನು ಭೂಮಾಪಕರು ಮತ್ತು ಕಾರ್ಯನಿರ್ವಾಹಕ ಅಧಿಕಾರಿ ಪರಿಶೀಲನೆ ನಡೆಸುವ ಮೂಲಕ ನಿಗಾ ವಹಿಸಲಿದ್ದಾರೆ. ಆಸ್ತಿ ಮಾಲೀಕ ಅರ್ಜಿಯೊಂದಿಗೆ 200 ರೂ. ಶುಲ್ಕ ಪಾವತಿಸಬೇಕಿದೆ.

    ವ್ಯತ್ಯಾಸ ಇದ್ದರೆ ಸರ್ವೆಯರ್​ಗೆ ವರ್ಗ: ದಿಶಾಂಕ್ ಆಪ್​ನಲ್ಲಿ ಆಸ್ತಿ ಅಳತೆ ವೇಳೆ ವಿಸ್ತೀರ್ಣ ಮತ್ತು ಚಕ್ಕುಬಂದಿ ವ್ಯತ್ಯಾಸ ಇದ್ದರೆ, ಗ್ರಾಮ ಠಾಣಾ ಹೊರಗೆ ಇದ್ದರೆ ಅಥವಾ ಆಸ್ತಿ ಮಾಲೀಕರು ಒಪ್ಪದ್ದಿರೇ ಇ-ಸ್ವತ್ತು ತಂತ್ರಾಂಶದಲ್ಲಿ ಅರ್ಜಿ ತಿರಸ್ಕೃತವಾಗಲಿದೆ. ಆನಂತರ ಭೂಮಾಪಕನ ಇಲಾಖೆ ಮೂಲಕ ಆಸ್ತಿ ಸಮೀಕ್ಷೆ ಮಾಡಿಸಿ ದಾಖಲೆಯೊಂದಿಗೆ ಮತ್ತೆ ಅರ್ಜಿ ಸಲ್ಲಿಸಬಹುದು. ಇಂತಹ ಆಸ್ತಿಗಳಿಗೆ ಸರ್ವೆಯರ್ ಸ್ಥಳಕ್ಕೆ ಭೇಟಿ ಕೊಟ್ಟು ದಿಶಾಂಕ್​ನಲ್ಲಿ ಜಿಪಿಎಸ್ ಮತ್ತು ಆಸ್ತಿ ಫೋಟೋ ಸೆರೆಹಿಡಿದು ಗ್ರಾಮ ಠಾಣಾ ಒಳಗೆ -ಹೊರಗೆ ಇದೆಯೇ ಎಂಬುದರ ಬಗ್ಗೆ ವರದಿ ಅಪ್​ಡೇಟ್ ಮಾಡಿ ಇ-ಸ್ವತ್ತು ತಂತ್ರಾಂಶಕ್ಕೆ ಮಾಹಿತಿ ನೀಡಲಿದ್ದಾರೆ. ಇದಾದ ಮೇಲೆ ಇ-ಖಾತಾ ಸಿಗಲಿದೆ.

    ಬಫರ್ ವಲಯದಲ್ಲಿ ಇದ್ದರೇ?: ಗ್ರಾಮ ಠಾಣಾ ಗಡಿ ಅಥವಾ ಗಡಿಯಿಂದ 20 ಮೀಟರ್ ಅಂತರದೊಳಗೆ ಇದ್ದರೇ ಅಂತಹ ಅರ್ಜಿಯನ್ನು ಸ್ವಯಂಕೃತವಾಗಿ ಭೂಮಾಪನ ಇಲಾಖೆ ಸರ್ವೆಯರ್ ದಿಶಾಂಕ್ ಲಾಗಿನ್​ಗೆ ವರ್ಗಾವಣೆ ಮಾಡಲಾಗುತ್ತದೆ. ದಿಶಾಂಕ್ ಆಪ್​ನಲ್ಲಿ ಭೂಮಾಪನ ಇಲಾಖೆ ಸರ್ವೆಯರ್ ತಮ್ಮ ಲಾಗಿನ್ ಐಡಿಗೆ ವರ್ಗಾವಣೆ ಮಾಡಿಕೊಂಡು ಖುದ್ದು ಸ್ಥಳಕ್ಕೆ ಭೇಟಿ ಕೊಟ್ಟು ಸರ್ವೆ ಮಾಡಲಿದ್ದಾರೆ. ಆನಂತರ ದಿಶಾಂಕ್ ಆಪ್ ಮೂಲಕವೇ ಗ್ರಾಮ ಪಂಚಾಯಿತಿ ಲಾಗಿನ್​ಗೆ ವರ್ಗಾವಣೆ ಮಾಡಲಿದ್ದಾರೆ. ಈ ನಕ್ಷೆಯನ್ನು ಪಡೆದು ಇ-ಸ್ವತ್ತು ತಂತ್ರಾಂಶದ ಮೂಲಕ ಇ-ಖಾತಾವನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನೀಡಲಿದ್ದಾರೆ.

    ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಕಂದಾಯ ಜಂಟಿಯಾಗಿ ದಿಶಾಂಕ್ ಸೇವೆ ಪರಿಚಯ ಪಡಿಸಲಾಗಿದೆ. ಈ ಬಗ್ಗೆ ಪಂಚಾಯಿತಿ ಅಧಿಕಾರಿಗಳಿಗೆ ತರಬೇತಿ ಕೊಟ್ಟು ಸೇವೆಗೆ ವೇಗ ನೀಡಲಾಗುತ್ತದೆ.

    | ಎಲ್.ಕೆ. ಅತೀಕ್ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಪ್ರಧಾನ ಕಾರ್ಯದರ್ಶಿ

    ಕೊರತೆ ತಗ್ಗಿಸುವ ಪ್ರಯತ್ನ: ಈ ಮೊದಲು ಗ್ರಾಮ ಠಾಣಾ ಆಸ್ತಿಗೆ ಇ-ಖಾತಾ ಪಡೆಯಲು ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿದರೆ ಅರ್ಜಿ ಸ್ವೀಕರಿಸಿ ಭೂಮಾಪನ ಇಲಾಖೆಗೆ ವರ್ಗಾವಣೆ ಮಾಡುತ್ತಿದ್ದರು. ತಹಶೀಲ್ದಾರ್ ಅವರಿಂದ ಗ್ರಾಮ ಠಾಣಾ ಒಳಗೆ ಬರಲಿದೆ ಎಂದು ಪ್ರಮಾಣ ಪತ್ರ ತರುವಂತೆ ಸೂಚಿಸುತ್ತಿದ್ದರು. ಸರ್ವೆಯರ್ ಬಂದು ನಕ್ಷೆ ತಯಾರಿಸಿ ಮೋಜಣಿಗೆ ಅಪ್​ಲೋಡ್ ಮಾಡಿದ ಮೇಲೆ ಇ-ಸ್ವತ್ತು ತಂತ್ರಾಂಶದಲ್ಲಿ ಸ್ವೀಕರಿಸಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಇ-ಖಾತಾ ಕೊಡುತ್ತಿದ್ದರು. ಆದರೆ, ದಿಶಾಂಕ್ ಆಪ್ ಬಳಕೆಯಿಂದ ಸರ್ವೆಯರ್ ಮತ್ತು ತಹಶೀಲ್ದಾರ್ ಪ್ರಮಾಣ ಪತ್ರ ಪಡೆಯುವ ಅಗತ್ಯ ಇರುವುದಿಲ್ಲ. ಮೋಜಣಿ ಶುಲ್ಕ 800 ರೂ. ಉಳಿತಾಯವಾಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts