ಜಿಲ್ಲೆ

ಬೆಂಗಳೂರು ಉಸ್ತುವಾರಿ ಬಿಕ್ಕಟ್ಟಿಗೆ ಸಚಿವ ಸೋಮಣ್ಣ ಪರಿಹಾರ ಸೂತ್ರ

ಬೆಂಗಳೂರು: ರಾಜ್ಯ ಸರ್ಕಾರದ ನಾಯಕತ್ವ ಬದಲಾದರೂ ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿಗೆ ಪೈಪೋಟಿಯಿಂದಾಗಿ ಬಿಕ್ಕಟ್ಟು ಬಗೆಹರಿದಿಲ್ಲ. ಇದೀಗ ಈ ಸಮಸ್ಯೆಗೆ ವಸತಿ ವಿ.ಸೋಮಣ್ಣ ಹೊಸ ಪರಿಹಾರ ಸೂತ್ರ ಪ್ರಸ್ತಾಪಿಸಿದ್ದಾರೆ.

ಬಿ.ಎಸ್.ಯಡಿಯೂರಪ್ಪ ಆಡಳಿತಾವಧಿಯಲ್ಲಿ ಐದು ಸಚಿವರು ಪಟ್ಟು ಹಿಡಿದ ಕಾರಣಕ್ಕೆ ಬೆಂಗಳೂರು ನಗರ ಜಿಲ್ಲೆ ಉಸ್ತುವಾರಿ ತಮ್ಮ ಬಳಿಯೇ ಇಟ್ಟುಕೊಂಡು ಗೊಂದಲ ಸೃಷ್ಟಿಯಾಗದಂತೆ ನೋಡಿಕೊಂಡಿದ್ದರು. ಬಸವರಾಜ ಬೊಮ್ಮಾಯಿ‌ ಸಿಎಂ ಆದ ಮೇಲೂ ಬಿಎಸ್ ವೈ ಅನುಸರಿಸಿದ ತಂತ್ರಗಾರಿಕೆಗೆ ಮೊರೆ ಹೋಗಿದ್ದಾರೆ. ಮುಂಬರುವ ಬಿಬಿಎಂಪಿ ಚುನಾವಣೆ ದೃಷ್ಟಿಯಿಂದ ಉಸ್ತುವಾರಿ ಮಹತ್ವದ್ದಾಗಿದ್ದು, ಇದಕ್ಕಾಗಿ ಪೈಪೋಟಿ ಮುಂದುವರಿದಿದೆ.

ರಾಜ್ಯ ಬಿಜೆಪಿ ಕಚೇರಿಯಲ್ಲಿ ಶನಿವಾರ ಕರೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ನಗರ ಜಿಲ್ಲೆಯನ್ನು ಎರಡು ಭಾಗ ಮಾಡಿ ತಲಾ ಅರ್ಧ ಉಸ್ತುವಾರಿಯನ್ನು ನನಗೆ ಮತ್ತು ಆರ್.ಅಶೋಕ್ ಅವರಿಗೆ ಹಂಚಿಕೆ ಮಾಡಲಿ ಎಂದು ಮುಖ್ಯಮಂತ್ರಿಗೆ ವಿನಂತಿಸಿದರು‌.

ಹಿರಿತನ ಹಾಗೂ ಅನುಭವವನ್ನು ಪರಿಗಣಿಸಿ ಬೆಂಗಳೂರು ನಗರ ಜಿಲ್ಲೆ ಉಸ್ತುವಾರಿ ನನಗೆ ನೀಡಬೇಕೆಂದು ಕೋರಿದ್ದು, ಮುಂದಿನದು ಸಿಎಂ ವಿವೇಚನೆಗೆ ಬಿಟ್ಟದ್ದು ಎಂದರು.