ಜಿಲ್ಲೆ

ಬಾಡಿಗೆ ಕಾರಿನೊಳಗೆ ಪೆಟ್ರೋಲ್​ ಸುರಿದುಕೊಂಡು ಪ್ರೇಮಿಗಳಿಬ್ಬರ ದುರಂತ ಸಾವು: ಉಡುಪಿಯಲ್ಲಿ ದುರ್ಘಟನೆ

ಉಡುಪಿ: ಸುಟ್ಟು ಕರಕಲಾಗಿರುವ ಕಾರಿನಲ್ಲಿ ಪ್ರೇಮಿಗಳಿಬ್ಬರ ಮೃತದೇಹ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಬ್ರಹ್ಮಾವರ ಠಾಣಾ ವ್ಯಾಪ್ತಿಯ ಮಂದಾರ್ತಿ ಸಮೀಪದ ಹೆಗ್ಗುಂಜ್ಜೆಯಲ್ಲಿ ನಡೆದಿದೆ.

ಮುಂಜಾನೆ 3 ಗಂಟೆ ಸುಮಾರಿಗೆ ಬೆಂಕಿ ಹೊತ್ತಿ ಉರಿಯುತ್ತಿದ್ದ ಕಾರಿನಲ್ಲಿ ಮೃತದೇಹಗಳು ಪತ್ತೆಯಾಗಿವೆ. ಕಾರಿನೊಳಗೆ ಪೆಟ್ರೋಲ್ ಸುರಿದುಕೊಂಡು ಯುವ ಜೋಡಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಮೃತರನ್ನು ಬೆಂಗಳೂರು ಆರ್.ಟಿ.ನಗರದ ಯಶವಂತ ಯಾದವ್ ಹಾಗೂ ಜ್ಯೋತಿ ಎಂದು ಗುರುತಿಸಲಾಗಿದೆ. ಕಳೆದ ಮೂರು ದಿನಗಳ ಹಿಂದೆ‌ ಇಬ್ಬರಿಗೆ ಸಂಬಂಧಿಸಿದಂತೆ ನಾಪತ್ತೆ ಪ್ರಕರಣ ದಾಖಲಾಗಿತ್ತು. ನಿನ್ನೆ ಮಂಗಳೂರಿಗೆ ಬಂದು ಹುಸೇನ್ ಎಂಬುವರಿಂದ ಕಾರು ಬಾಡಿಗೆ ಪಡೆದಿದ್ದರು. ಬಳಿಕ ಕಾರಿನೊಳಗೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಸ್ಥಳೀಯರ ನೆರವಿನಿಂದ ಪೊಲೀಸರು ಬೆಂಕಿ ನಂದಿಸಿದಾಗ ಇಬ್ಬರ ಶವ ಪತ್ತೆಯಾಗಿದೆ. ಸ್ವಿಫ್ಟ್​ ಕಾರು ಸಂಪೂರ್ಣ ಸುಟ್ಟು ಕರಕಲಾಗಿದೆ.

ಹೆಬ್ಬಾಳ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಾಗಿತ್ತು. ಜ್ಯೋತಿ(23) ತಾಯಿ ನೀಡಿದ ದೂರು ಆಧರಿಸಿ ಪೊಲೀಸರು ದೂರು ದಾಖಲಿಸಿದ್ದರು. ಇಂಟರ್‌ವ್ಯೂ ಇದೆ ಅಂತ ಹೇಳಿ ಮೇ 18ರಂದು ಬೆಳಿಗ್ಗೆ 11.30ಕ್ಕೆ ಮನೆಯಿಂದ ಆಚೆ ಹೋದ ಜ್ಯೋತಿ ವಾಪಾಸ್ ಬಂದಿಲ್ಲ ಅಂತಾ ಆಕೆಯ ತಾಯಿ ದೂರಿನಲ್ಲಿ ಉಲ್ಲೇಖಿಸಿದ್ದಳು. ಜ್ಯೋತಿ ಹೆಬ್ಬಾಳ ಚೋಳನಾಯಕನಹಳ್ಳಿ ನಿವಾಸಿ.

ಇನ್ನೊಂದೆಡೆ ಯಶವಂತ್ ಯಾದವ್ (23) ತಂದೆಯಿಂದಲೂ ಮಿಸ್ಸಿಂಗ್ ಕೇಸ್ ದಾಖಲಾಗಿತ್ತು. ಯಶವಂತ್ ಕೂಡ ಮೇ 18ರಂದು ಮನೆಯಿಂದ ಹೋಗಿದ್ದ. ಟ್ಯಾಲಿ ಕ್ಲಾಸ್‌ ಇದೆ ಅಂತಾ ಹೇಳಿ ಮಧ್ಯಾಹ್ನ 12 ಗಂಟೆಗೆ ಹೊರ ಹೋಗಿದ್ದ. ಬೈಕ್‌ನಲ್ಲಿ ಹೋಗಿದ್ದ ಮಗನನ್ನು ಪತ್ತೆ ಹಚ್ಚುವಂತೆ ಯಶವಂತ್ ತಂದೆ ಪಟೇಲ್ ಮುನಿಯಪ್ಪ ದೂರು ದಾಖಲಿಸಿದ್ದರು. (ದಿಗ್ವಿಜಯ ನ್ಯೂಸ್​)