ಜಿಲ್ಲೆ

ಪ್ರಿಯಕರನಿಂದ ಚೂರಿ ಇರಿತ ಪ್ರಕರಣ: ನಿಶ್ಚಿತಾರ್ಥ ನೆರವೇರಿದ ಒಂದೇ ವಾರದಲ್ಲಿ ಯುವತಿ ದುರಂತ ಸಾವು

ಉಡುಪಿ: ಪ್ರೇಯಸಿಗೆ, ಪ್ರಿಯಕರನಿಂದ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಭೀರವಾಗಿ ಗಾಯಗೊಂಡಿದ್ದ ಪ್ರೇಯಸಿ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾಳೆ. ಪ್ರಿಯಕರನಿಗೆ ಚಿಕಿತ್ಸೆ ಮುಂದುವರಿದಿದೆ.

ಸೌಮ್ಯಶ್ರೀ ಭಂಡಾರಿ ಮೃತ ಯುವತಿ. ಪ್ರಿಯಕರ ಸಂದೇಶ್​ ಕುಲಾಲ್, ಸೌಮ್ಯಶ್ರೀಗೆ​ ಚಾಕು ಇರಿದು, ತಾನು ಕತ್ತು ಕೊಯ್ದುಕೊಂಡಿದ್ದ. ಈ ಘಟನೆ ಸೋಮವಾರ ಉಡುಪಿಯ ಸಂತಕಟ್ಟೆಯಲ್ಲಿ ಸಂಜೆ ನಡೆದಿತ್ತು. ಸೌಮ್ಯಶ್ರೀ ಕೆಲಸ ಮುಗಿಸಿ, ಮನೆಗೆ ಹೋಗುತ್ತಿದ್ದಾಗ ಸ್ಕೂಟಿಯನ್ನು ತಡೆದು ಸಂದೇಶ್​ ಕೃತ್ಯ ಎಸಗಿದ್ದ. ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ಇಬ್ಬರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಿಸದೇ ಸೌಮ್ಯಶ್ರೀ ದುರಂತ ಸಾವಿಗೀಡಾದರೆ, ಗಾಯಗೊಂಡಿರುವ ಸಂದೇಶ್​ಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

ಉಡುಪಿಯ ಸಂತೆಕಟ್ಟೆ ಸಮೀಪ ಉದ್ಯೋಗಿಯಾಗಿದ್ದ ಸೌಮ್ಯಶ್ರೀ ಮತ್ತು ಸಂದೇಶ್ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಸೌಮ್ಯಶ್ರೀಗೆ ವಾರದ ಹಿಂದಷ್ಟೇ ನಿಶ್ಚಿತಾರ್ಥ ನೆರವೇರಿತ್ತು. ಇದರಿಂದ ಗೆಳೆಯ ಸಂದೇಶ ಕುಲಾಲ್ ಕುಪಿತಗೊಂಡಿದ್ದ. ಇದೇ ವಿಚಾರವಾಗಿ ಇಬ್ಬರ ನಡುವೆ ಜಗಳವೂ ನಡೆದಿತ್ತು. ಹೀಗಿರುವಾಗ ನಿನ್ನೆ ಸಂಜೆ ಬ್ಯಾಂಕಿನಿಂದ ಆಕೆ ಮನೆಗೆ ವಾಪಸ್ ಆಗುತ್ತಿದ್ದ ಸಂದರ್ಭದಲ್ಲಿ ಸಂದೇಶ್​ ಸಂತೆಕಟ್ಟೆ ರಾಷ್ಟ್ರೀಯ ಹೆದ್ದಾರಿ ಬಳಿ ಅಡ್ಡಗಟ್ಟಿ ನಿಂತಿದ್ದಾನೆ. ಈ ವೇಳೆ ಯುವತಿಯ ಜೊತೆ ವಾಗ್ವಾದಕ್ಕೆ ಇಳಿದಿದ್ದಾನೆ.

ಇಬ್ಬರ ನಡುವಿನ ಜಗಳ ತಾರಕಕ್ಕೇರಿದಾಗ ಕೋಪದಿಂದ ಮನಸ್ಸಿನ ನಿಯಂತ್ರಣ ಕಳೆದುಕೊಂಡ ಸಂದೇಶ್​ ಚಾಕು ತೆಗೆದು ಸೌಮ್ಯಶ್ರೀ ಸ್ಥಳದಲ್ಲೇ ಇರಿದಿದ್ದಾನೆ. ಇದರಿಂದ ಸೌಮ್ಯಶ್ರೀ ದ್ವಿಚಕ್ರವಾಹನದಿಂದ ಕೆಳಗೆ ಕುಸಿದು ಬಿದ್ದು ಒದ್ದಾಡಲು ಆರಂಭಿಸಿದ್ದಾಳೆ. ಇದನ್ನು ನೋಡಿ ಪಾಗಲ್ ಪ್ರೇಮಿಯೂ ನಂತರ ಅದೇ ಚಾಕುವಿನಿಂದ ತನ್ನ ಕುತ್ತಿಗೆ ಕೊಯ್ದುಕೊಂಡಿದ್ದಾನೆ. ಇಬ್ಬರು ಒದ್ದಾಡುವುದನ್ನು ನೋಡಿದ ಸ್ಥಳೀಯರು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.

ಉಡುಪಿ ನಗರ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಾಗಿದ್ದು, ಎಸ್ಪಿ ಕುಮಾರ್ ಚಂದ್ರ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿಯನ್ನು ಕಲೆಹಾಕಿದ್ದಾರೆ. (ದಿಗ್ವಿಜಯ ನ್ಯೂಸ್​)