ಕುಂದಾಪುರ: ಉಡುಪಿ ಜಿಲ್ಲೆ ಕೋಟತಟ್ಟು ಕೊರಗ ಕಾಲನಿ ಮೆಹೆಂದಿ ಕಾರ್ಯಕ್ರಮದಲ್ಲಿ ಡಿಜೆ ಹಾಕಿದ್ದಕ್ಕೆ ಹಲ್ಲೆ ನಡೆಸಿದ ಪೊಲೀಸರ ಮೇಲೆ ಕ್ರಮಕೈಗೊಳ್ಳಲಾಗಿದೆ. ದಲಿತರು, ಕೆಳಸ್ತರದ ವ್ಯಕ್ತಿಗಳಿಗೆ ನೋವಾಗಬಾರದೆಂಬ ಬದ್ದತೆ ಇದೆ. ಪ್ರಕರಣವನ್ನು ಸಿಓಡಿ ತನಿಖೆಗೆ ವಹಿಸಲಾಗುತ್ತದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಪೊಲೀಸರು ನೊಂದವರ ಮೇಲೆ ಹಾಕಿದ ಕೇಸು ಸುಳ್ಳು ಎಂಬುದು ಅರಿವಿದ್ದು ಇದರ ಬಗ್ಗೆ ತನಿಖೆ ನಡೆಯುತ್ತದೆ ಎಂದು ಹೇಳಿದರು. ಕಳೆದ ಸೋಮವಾರ ಕೋಟತಟ್ಟು ಬಾರಿಕೆರೆ ಕೊರಗ ಕಾಲನಿಯಲ್ಲಿ ಮೆಹೆಂದಿ ವೇಳೆ ಪೊಲೀಸರಿಂದ ಹಲ್ಲೆಗೊಳಗಾದ ಕೊರಗ ಸಮುದಾಯದವರನ್ನು ಭೇಟಿಮಾಡಿ ಆರಗ ಜ್ಞಾನೇಂದ್ರ ಮಾತನಾಡಿದರು.
ತಳಮಟ್ಟದ ಸಮುದಾಯದ ಯಾರು ಹೆದರುವ ಅಗತ್ಯವಿಲ್ಲ, ನಾವಿದ್ದೇವೆ, ಸರ್ಕಾಕರವಿದೆ. ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಒಬ್ಬರ ಅಮಾನತು ಮಾಡಲಾಗಿದೆ. ಉಳಿದವರ ವರ್ಗಾವಣೆ ಮಾಡಲಾಗಿದ್ದು ಮುಂದಿನ ಕ್ರಮದ ಬಗ್ಗೆ ಅವಲೋಕನ ಮಾಡಲಾಗುತ್ತದೆ. ಪ್ರಕರಣಕ್ಕೆ ಸಂಬಂದ ಪ್ರಕರಣದ ತನಿಖೆ ಕೂಲಂಕುಷ ನಡೆಯಲಿದೆ. ಘಟನೆ ನಡೆದ 2-3 ದಿನದ ಮೇಲೆ ಪೊಲೀಸ್ ಸಿಬ್ಬಂದಿ ಕೊರಗರು ಸಹಿತ ಇನ್ನು ಕೆಲವರ ಮೇಲೆ ಕೇಸು ದಾಖಲಿಸಿದ್ದು ಇದೊಂದು ಸುಳ್ಳು ಪ್ರಕರಣ ಎಂದು ಎಲ್ಲರಿಗೂ ತಿಳಿಯುತ್ತದೆ.
ಸಂತ್ರಸ್ತರಿಗೆ 6 ಮಂದಿಗೆ ಸರ್ಕಾರದಿಂದ ತಲಾ 2 ಲಕ್ಷ ಪರಿಹಾರ ಘೋಷಿಸಿದ್ದು ಮುಂಗಡವಾಗಿ 50 ಸಾವಿರ ಪರಿಹಾರ ಮೊತ್ತ ನೀಡಿದ್ದೇವೆ ಎಂದರು. ಪೊಲೀಸರು ರೌಡಿ ಕೆಲಸ ಮಾಡಬಾರದು. ಇಲಾಖೆಗೆ ಕಪ್ಪು ಚುಕ್ಕೆ ತರುವ ಕೆಲಸ ಇಲಾಖೆಯಿಂದ ಆಗಿದ್ದಕ್ಕೆ ನೋವಾಗಿದೆ. ರಾಜ್ಯದಲ್ಲಿ 1 ಲಕ್ಷ ಪೊಲೀಸರಿದ್ದು ಅವರಲ್ಲಿರುವ ಒಳ್ಳೆ ಪೊಲೀಸರಿಗೆ ಅವಮಾನವಾಗುವ ಕೆಲಸ ಮಾಡುವ ಕೆಲವು ಪೊಲೀಸರಿಂದ ಹೀಗಾಗುತ್ತಿದೆ. ಅವರು ಪೊಲೀಸ್ ಇಲಾಖೆಗೆ ಯೋಗ್ಯರೋ ಇಲ್ಲವೋ ಎಂಬುದನ್ನು ಸರಕಾರ ನಿರ್ಧರಿಸುತ್ತದೆ.
ಸಚಿವ ಕೋಟ ಶ್ರೀನಿವಾಸ ಪೂಜಾರಿ, ನಾಗರಿಕ ಆಹಾರ ಪೂರೈಕೆ ಉಪಾಧ್ಯಕ್ಷ ಕಿರಣ್ ಕೊಡ್ಗಿ, ಡಿಸಿ ಕೂರ್ಮಾ ರಾವ್, ಎಸ್ಪಿ ವಿಷ್ಣುವರ್ಧನ್ ಇದ್ದರು.