ಉಡುಪಿ: ಉಡುಪಿಯ ಸರ್ಕಾರಿ ಮಹಿಳಾ ಜೂನಿಯರ್ ಕಾಲೇಜಿನ ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ತರಗತಿಯಲ್ಲಿ ಹಿಜಾಬ್ ಹಾಕಿಕೊಂಡು ಕೂರುತ್ತಿದ್ದೆವು ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಫೋಟೋ ಬಗ್ಗೆ ಅದೇ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ಸ್ಪಷ್ಟನೆ ನೀಡಿದ್ದಾಳೆ.
ತರಗತಿಯಲ್ಲಿ ಹಿಜಾಬ್ ಹಾಕಿಕೊಂಡೆ ಕೂರುತ್ತಿದ್ದೆವು ಎಂದು ಹಳೆಯ ಫೋಟೋವನ್ನು ಯುವತಿಯರು ವೈರಲ್ ಮಾಡಿದ್ದಾರೆ. ಆ ಫೋಟೋವನ್ನು ಸಿಎಫ್ಐ ಸಂಘಟನೆಯ ಕಾರ್ಯಕರ್ತರು ತಮ್ಮ ಟ್ವಿಟರ್ ಮೂಲಕ ಹಂಚಿಕೊಂಡಿದ್ದಾರೆ.
ಆದರೆ, ಈ ಬಗ್ಗೆ ಮಾತನಾಡಿರುವ ಅದೇ ಕಾಲೇಜಿನ ವಿದ್ಯಾರ್ಥಿನಿ ವೈರಲ್ ಆಗುತ್ತಿರುವ ಫೋಟೋ ನಮ್ಮ ತರಗತಿಯದಲ್ಲ ಎಂದಿದ್ದಾಳೆ. ನಮ್ಮ ತರಗತಿಯಲ್ಲಿ ಹಿಜಾಬ್ ಹಾಕಿ ಕೂರಲು ಅವಕಾಶವೇ ಇಲ್ಲ. ಕೇವಲ ಫೋಟೋ ತೆಗೆಯುವ ಉದ್ದೇಶದಿಂದ ಹಿಜಾಬ್ ಹಾಕಿ ಕುಳಿತಿರಬಹುದು ಎಂದು ಹೇಳಿದ್ದಾಳೆ.
ಈ ವಿವಾದದಿಂದಾಗಿ ನಮ್ಮ ಶೈಕ್ಷಣಿಕ ಜೀವನವೇ ಹಾಳಾಗಿದೆ. ಈ ವಿವಾದವನ್ನು ಆದಷ್ಟು ಬೇಗ ಬಗೆಹರಿಸಿ ಕಾಲೇಜು ಆರಂಭಿಸಿ ಎಂದು ಪ್ರತಿಭಟನೆಯಲ್ಲಿ ಭಾಗಿಯಾಗಿರುವ ಮೂವರ ವಿದ್ಯಾರ್ಥಿನಿ ಸಹಪಾಠಿ ಹೇಳಿಕೆ ನೀಡಿದ್ದಾಳೆ. (ದಿಗ್ವಿಜಯ ನ್ಯೂಸ್)