ಜಿಲ್ಲೆ

ಉಸಿರಾಟದ ಸಮಸ್ಯೆಯಿಂದ ಪದ್ಮಶ್ರೀ ಪುರಸ್ಕೃತೆ ಸುಕ್ರಜ್ಜಿ ಆಸ್ಪತ್ರೆಗೆ ದಾಖಲು

ಮಂಗಳೂರು: ಪದ್ಮಶ್ರೀ ಪುರಸ್ಕೃತ ಉತ್ತರ ಕನ್ನಡ ಜಿಲ್ಲೆಯ ಸುಕ್ರಿ ಬೊಮ್ಮ ಗೌಡ ರವರು ಉಸಿರಾಟದ ಸಮಸ್ಯೆಯಿಂದ ಮಂಗಳೂರಿನ ಜ್ಯೋತಿ ಕೆ ಎಂಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯ ಆರೋಗ್ಯ ಸ್ಥಿತಿ ಉತ್ತಮವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಳೆದ ಸುಮಾರು ನಾಲ್ಕು ತಿಂಗಳಿಂದ ಉಸಿರಾಟದ ಸಮಸ್ಯೆ ಯಿಂದ ಬಳಲುತ್ತಿದ್ದ ಅವರಿಗೆ ಮನೆಯಲ್ಲೇ ಆಕ್ಸಿಜನ್ ಇಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ನಾಲ್ಕು ದಿನಗಳಿಂದ ಪರಿಸ್ಥಿತಿ ತುಸು ಬಿಗಡಾಯಿಸಿದ ಹಿನ್ನೆಲೆಯಲ್ಲಿ ಹೊನ್ನಾವರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ವೈದ್ಯರ ಸೂಚನೆ ಮೇರೆಗೆ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆತರಲಾಗಿದೆ.

ವೈದ್ಯರು ಬೊಮ್ಮಗೌಡ ಅವರ ಆರೋಗ್ಯ ಕುರಿತು ನಿಗಾವಹಿಸಿದ್ದಾರೆ. ತಪಾಸಣೆ ವೇಳೆ ಅವರ ಹೃದಯದ ರಕ್ತ ನಾಳದಲ್ಲಿ ಬ್ಲಾಕ್ ಕಂಡುಬಂದ ಹಿನ್ನೆಲೆಯಲ್ಲಿ ಸ್ಟಂಟ್ ಅಳವಡಿಸಲಾಗಿದೆ. ವೈದ್ಯರು ಯಾವುದೇ ಸಮಸ್ಯೆ ಇಲ್ಲ ಎಂದು ತಿಳಿಸಿರುವುದಾಗಿ ಅವರ ಆಪ್ತರಾದ ದಿನೇಶ್ ಹೊಳ್ಳ ತಿಳಿಸಿದ್ದಾರೆ.

ಸುಕ್ರಜ್ಜಿ ಓರ್ವ ಪದ್ಮಶ್ರೀ ಪುರಸ್ಕ್ರತ ಜಾನಪದ ಗಾಯಕಿ. ಸುಕ್ರಜ್ಜಿಗೆ ಸುಮಾರು 5 ಸಾವಿರ ಹಾಲಕ್ಕಿ ಹಾಡುಗಳು ಕಂಠಪಾಟವಾಗಿವೆ ಮತ್ತು ಅವುಗಳಲ್ಲಿ ಹಲವು ನೂರು ವರ್ಷಕ್ಕಿಂತಲೂ ಹಳೆಯದಾಗಿದೆ.