ಜಿಲ್ಲೆ

ಸರ್ಕಾರದ ಹಿಡಿತದಿಂದ ದೇವಸ್ಥಾನಗಳು ಮುಕ್ತ: ಸಿಎಂ ಹೇಳಿಕೆಗೆ ಕಾಶೀ ಜಗದ್ಗುರುಗಳ ಸ್ವಾಗತ

ಶಿವಮೊಗ್ಗ: ಬಹುಸಂಖ್ಯಾತ ಹಿಂದೂಗಳ ಬಹುದಿನಗಳ ಬೇಡಿಕೆಯಾಗಿದ್ದ ಹಿಂದೂ ಧಾರ್ಮಿಕ ಸಂಸ್ಥೆಗಳ ಮೇಲಿನ ಸರ್ಕಾರದ ಹಿಡಿತವನ್ನು ಮುಕ್ತಗೊಳಿಸುವ ಕುರಿತು ಸರ್ಕಾರ ಚಿಂತನೆ ನಡೆಸುತ್ತಿರುವುದನ್ನು ಕಾಶೀ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಸ್ವಾಗತಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂತಹ ಐತಿಹಾಸಿಕ ಹೇಳಿಕೆ ನೀಡಿದ್ದು, ಹಿಂದೂ ಧಾರ್ಮಿಕ ಸಂಸ್ಥೆಗಳ ಪಾಲಿಗೆ ಇದು ಐತಿಹಾಸಿಕ ನಿರ್ಣಯವಾಗಲಿದೆ ಎಂದು ಕಾಶೀ ಜಗದ್ಗುರುಗಳು ಬಣ್ಣಿಸಿದ್ದಾರೆ.

ಪ್ರಾಚೀನ ಕಾಲದಿಂದ ಬಂದಿರುವ ದೇವಾಲಯಗಳು ಸರ್ಕಾರದ ಅಧೀನದಲ್ಲಿ ನಡೆಯುತ್ತಿರುವುದರಿಂದ ಅಭಿವೃದ್ಧಿ ಕುಂಠಿತವಾಗುತ್ತದೆ. ಸರ್ಕಾರ ಈ ಬಗ್ಗೆ ಚಿಂತನೆ ಆರಂಭಿಸಿದ್ದು, ದೇವಸ್ಥಾನಗಳ ಆಡಳಿತದಲ್ಲಿ ಹಸ್ತಕ್ಷೇಪ ಸರಿಯಲ್ಲ ಎಂಬುದು ಮನವರಿಕೆಯಾಗಿದ್ದು, ಕೂಡಲೇ ಸರ್ಕಾರ ಆ ನಿಟ್ಟಿನಲ್ಲಿ ನಿರ್ಣಯವನ್ನು ತೆಗೆದುಕೊಳ್ಳುವಂತೆ ಜಗದ್ಗುರುಗಳು ಆಗ್ರಹಿಸಿದ್ದಾರೆ.