More

    ಮೂರನೇ ಅಲೆ ಹೊಸ್ತಿಲಲ್ಲಿ ಭಾರತ: ದೇಶದಲ್ಲಿ ಕರೊನಾ ದೈನಂದಿನ ಕೇಸ್ ಶೇ.44 ಹೆಚ್ಚಳ; ರಾಜ್ಯದಲ್ಲೂ ಏರಿಕೆ

    ನವದೆಹಲಿ/ಬೆಂಗಳೂರು: ವಿಶ್ವದ ಹಲವೆಡೆ ಕರೊನಾ ನಾಲ್ಕನೇ ಅಲೆ ಅಪ್ಪಳಿಸಿರುವಂತೆಯೇ ಭಾರತದಲ್ಲಿ ದೈನಂದಿನ ಸೋಂಕು ಪ್ರಕರಣಗಳ ಸಂಖ್ಯೆ ಶೇ.44 ಏರಿಕೆ ಆಗಿರುವುದು 3ನೇ ಅಲೆಯ ಆತಂಕವನ್ನು ಇಮ್ಮಡಿಗೊಳಿಸಿದೆ. ಇತ್ತ ಕರ್ನಾಟಕದಲ್ಲೂ ಎರಡೂವರೆ ತಿಂಗಳ ಬಳಿಕ ಕೋವಿಡ್ ಪ್ರಕರಣ ಹೆಚ್ಚಾಗಿದ್ದು, ಬುಧವಾರ ಒಂದೇ ದಿನ 566 ಹೊಸ ಪ್ರಕರಣಗಳು ದೃಢಪಟ್ಟಿದೆ. ಈ ವರ್ಷ ಏಪ್ರಿಲ್ ಮತ್ತು ಮೇನಲ್ಲಿ ಕಾಡಿದ ಕರೊನಾ ಎರಡನೇ ಅಲೆಯ ನಂತರ ಸೋಂಕನ್ನು ಹತೋಟಿಗೆ ತರಲು ಯಶಸ್ವಿಯಾದ ಭಾರತ, ಒಮಿಕ್ರಾನ್ ರೂಪಾಂತರಿಯ ಪತ್ತೆಯಿಂದ ಹೊಸ ತಲೆನೋವು ಎದುರಿಸಲಾರಂಭಿಸಿದೆ. ಅತಿ ವೇಗವಾಗಿ ಹರಡುವ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ 781ಕ್ಕೆ ಏರಿದೆ. ಭಾರತದ 21 ರಾಜ್ಯಗಳಲ್ಲಿ ಈ ಸೋಂಕು ಕಂಡು ಬಂದಿದೆ.

    ದೆಹಲಿಯಲ್ಲಿ 238 ಒಮಿಕ್ರಾನ್ ಪ್ರಕರಣಗಳಿದ್ದರೆ, ದೈನಿಕ ಕೋವಿಡ್ ಸಂಖ್ಯೆ 923ಕ್ಕೆ ಏರಿಕೆಯಾಗಿದೆ. ಮಹಾರಾಷ್ಟ್ರದಲ್ಲಿ ಒಮಿಕ್ರಾನ್ 252 ಒಮಿಕ್ರಾನ್ ಕೇಸ್ ಪತ್ತೆಯಾಗಿದ್ದರೆ ದೈನಿಕ ಕೇಸ್​ಗಳ ಸಂಖ್ಯೆ 2000ಕ್ಕೂ ಅಧಿಕವಾಗಿದೆ. ಏತನ್ಮಧ್ಯೆ, ಬುಧವಾರ ಬೆಳಗ್ಗೆ ಅಂತ್ಯಗೊಂಡ 24 ಗಂಟೆ ಅವಧಿಯಲ್ಲಿ ದೇಶದಲ್ಲಿ 9,195 ದೈನಿಕ ಕೇಸ್ ಪತ್ತೆಯಾಗಿವೆ. ಮಂಗಳವಾರ 6,358 ಪ್ರಕರಣಗಳು ದೃಢಪಟ್ಟಿದ್ದವು. ಸೋಂಕಿತರ ಗುಣಮುಖ ದರ ಶೇಕಡ 98.40 ಆಗಿದೆ. ದೇಶದಾದ್ಯಂತ ಇದುವರೆಗೆ 143.75 ಕೋಟಿ ಡೋಸ್​ಗೂ ಅಧಿಕ ಲಸಿಕೆ ಹಾಕಲಾಗಿದೆ.

    ರಾಜ್ಯದಲ್ಲಿ 566 ಹೊಸ ಕೇಸ್

    ಬೆಂಗಳೂರು: ಮುಂಬರುವ ಫೆಬ್ರವರಿಯಲ್ಲಿ ಕೋವಿಡ್ 3ನೇ ಮೂರನೇ ಅಲೆ ಅಪ್ಪಳಿಸಬಹುದೆಂಬ ತಜ್ಞರ ಎಚ್ಚರಿಕೆ ಬೆನ್ನಲ್ಲೇ ರಾಜ್ಯದಲ್ಲಿ ಬುಧವಾರ ಸೋಂಕು ಪ್ರಕರಣಗಳ ಸಂಖ್ಯೆ 566ಕ್ಕೆ ಏರಿಕೆಯಾಗಿದೆ. ಇದು ಎರಡೂವರೆ ತಿಂಗಳ ಬಳಿಕ ವರದಿಯಾದ ಗರಿಷ್ಠ ದೈನಂದಿನ ಪ್ರಕರಣವಾಗಿದೆ.

    ರಾಜ್ಯದಲ್ಲಿ ಕೋವಿಡ್ ಪರೀಕ್ಷೆ ಸಂಖ್ಯೆ ಹೆಚ್ಚಿಸಲಾಗಿದೆ. ಜತೆಗೆ ತೀವ್ರ ಉಸಿರಾಟದ ಸಮಸ್ಯೆ (ಸಾರಿ) ಶೀತ ಜ್ವರ (ಐಎಲ್​ಐ) ಪರೀಕ್ಷೆ ಆರಂಭಿಸಿರುವ ಹಿನ್ನೆಲೆಯಲ್ಲಿ ಸೋಂಕಿತರ ಸಂಖ್ಯೆಯೂ ಹೆಚ್ಚಾಗಿದೆ. ಅ.3ರಂದು 644 ಪ್ರಕರಣಗಳು ವರದಿಯಾದ ಬಳಿಕ ಬುಧವಾರದ್ದೇ ಅತಿ ಹೆಚ್ಚಿನ ದೈನಂದಿನ ಪ್ರಕರಣಗಳಾಗಿವೆ. ಇದರೊಂದಿಗೆ ಸಕ್ರಿಯ ಪ್ರಕರಣಗಳ ಸಂಖ್ಯೆ 7,771ಕ್ಕೆ ಏರಿಕೆಯಾಗಿದೆ. ಒಟ್ಟು ಪ್ರಕರಣಗಳ ಸಂಖ್ಯೆ 30.05 ಲಕ್ಷ ಮೀರಿದೆ.

    6 ಮಂದಿ ಸಾವು: ಬೆಂಗಳೂರು ನಗರದಲ್ಲಿ ನಾಲ್ವರು ಹಾಗೂ ಚಿತ್ರದುರ್ಗ ಮತ್ತು ತುಮಕೂರಿನಲ್ಲಿ ತಲಾ ಒಬ್ಬರಂತೆ ಆರು ಸೋಂಕಿತರು ಸಾವನ್ನಪ್ಪಿದ್ದು, ಮೃತರ ಒಟ್ಟು ಸಂಖ್ಯೆ 38,324ಕ್ಕೆ ಏರಿಕೆಯಾಗಿದೆ. ಬೆಂಗಳೂರು ನಗರದಲ್ಲಿ ಸೋಂಕು ಪ್ರಕರಣಗಳ ಸಂಖ್ಯೆ 400ಕ್ಕೆ ಹೆಚ್ಚಳವಾಗಿದೆ. ದಕ್ಷಿಣ ಕನ್ನಡದಲ್ಲಿ 33, ಹಾಸನದಲ್ಲಿ 31, ಉಡುಪಿಯಲ್ಲಿ 17, ಕೊಡಗು ಮತ್ತು ಕೋಲಾರದಲ್ಲಿ ತಲಾ 14 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. 16 ಜಿಲ್ಲೆಗಳಲ್ಲಿ ಸೋಂಕು ಪ್ರಕರಣಗಳ ಸಂಖ್ಯೆ ಒಂದಂಕಿ ಇದೆ. 8 ಜಿಲ್ಲೆಗಳಲ್ಲಿ ಸೋಂಕು ಪ್ರಕರಣಗಳು ವರದಿಯಾಗಿಲ್ಲ.

    ಪರೀಕ್ಷೆ ಹೆಚ್ಚಳ: ರಾಜ್ಯದಲ್ಲಿ ಕೋವಿಡ್ ಪರೀಕ್ಷೆಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದ್ದು, ಬುಧವಾರ 21,932 ರ್ಯಾಪಿಡ್ ಆಂಟಿಜನ್ ಟೆಸ್ಟ್ ಹಾಗೂ 86,794 ಆರ್​ಟಿಪಿಸಿಆರ್ ಸೇರಿ ಒಟ್ಟು 1,08, 726ಕ್ಕೂ ಅಧಿಕ ಪರೀಕ್ಷೆ ನಡೆಸಲಾಗಿದೆ. ಈ ವರ್ಷದಲ್ಲಿ 4.20 ಕೋಟಿಗೂ ಅಧಿಕ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಒಟ್ಟು ಪರೀಕ್ಷೆಗಳ ಸಂಖ್ಯೆ 5.62 ಕೋಟಿ ದಾಟಿದೆ.

    ಪ್ರಕರಣಗಳ ಏರಿಳಿತ: ರಾಜ್ಯದಲ್ಲಿ ಸೋಂಕು ಪ್ರಕರಣಗಳ ಸಂಖ್ಯೆ ಏರಿಳಿತವಾಗುತ್ತಿದೆ. ಕೆಲ ದಿನಗಳ ಹಿಂದೆ 400 ಗಡಿ ಮೀರಿತ್ತು. ನಂತರ 250-300 ಆಸುಪಾಸಿನಲ್ಲಿ ಪ್ರಕರಣ ವರದಿಯಾಗುತ್ತಿದ್ದವು. ಇದೀಗ ದಿಢೀರ್ ಏರಿಕೆಯಾಗಿದೆ.

    23 ಕಾರ್ವಿುಕರಿಗೆ ಸೋಂಕು: ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ದೇವಿಹಳ್ಳಿ ಎಸ್ಟೇಟ್ ಹಾಗೂ ಆನೆಮಹಲ್ ಎಸ್ಟೇಟ್​ಗಳಲ್ಲಿ ಕೆಲಸ ಮಾಡುತ್ತಿದ್ದ ಪಶ್ಚಿಮ ಬಂಗಾಳ ಮೂಲದ 23 ಕಾರ್ವಿುಕರಿಗೆ ಕೋವಿಡ್ ಸೋಂಕು ಕಾಣಿಸಿಕೊಂಡಿದೆ. ಈ ಎಸ್ಟೇಟ್​ಗಳಲ್ಲಿ ಒಟ್ಟು 35 ಕಾರ್ವಿುಕರು ಕೆಲಸ ಮಾಡುತ್ತಿದ್ದರು. ಈ ಪೈಕಿ ಇಬ್ಬರು ಕಳೆದ ವಾರ ಪಶ್ಚಿಮ ಬಂಗಾಳಕ್ಕೆ ಹೋಗಿ ವಾಪಸಾಗಿದ್ದರು. ಈ ಹಿನ್ನೆಲೆಯಲ್ಲಿ ಕಾರ್ವಿುಕರನ್ನು ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ಕಂಡುಬಂದಿದೆ.

    ವಿದ್ಯಾರ್ಥಿಗಳಿಗೆ ಪಾಸಿಟಿವ್: ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಹಳ್ಳಿಕೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಐವರು ವಿದ್ಯಾರ್ಥಿಗಳಿಗೆ ಕರೊನಾ ದೃಢಪಟ್ಟಿದೆ. ಶಾಲೆಯಲ್ಲಿ 60 ವಿದ್ಯಾರ್ಥಿಗಳಿದ್ದು, ಡಿ.28ರಂದು ಸಾಮೂಹಿಕವಾಗಿ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಶಾಲೆಯ ಎಲ್ಲ ಕೊಠಡಿಗಳಿಗೂ ಸ್ಯಾನಿಟೈಸರ್ ಸಿಂಪಡಿಸಿ ಸೀಲ್​ಡೌನ್ ಮಾಡಲಾಗಿದೆ.

    ವಸತಿಶಾಲೆಯ 10 ಮಕ್ಕಳಿಗೆ ಸೋಂಕು: ಕೋಲಾರ ಜಿಲ್ಲೆಯ ಸೋಮಯಾಜಲಹಳ್ಳಿ ಮುರಾರ್ಜಿ ವಸತಿ ಶಾಲೆಯ 10 ವಿದ್ಯಾರ್ಥಿಗಳಿಗೆ ಬುಧವಾರ ಕರೊನಾ ಸೋಂಕು ದೃಢಪಟ್ಟಿದ್ದು, ಎಲ್ಲರನ್ನೂ ಐಸೋಲೇಷನ್ ಮಾಡಲಾಗಿದೆ. ಇಲ್ಲಿ ಒಟ್ಟು 221 ಮಕ್ಕಳಿದ್ದಾರೆ.

    ಇದು ವಾಟ್ಸ್​ಆ್ಯಪ್​ ಅಡ್ಮಿನ್ಸ್​ ಓದಲೇಬೇಕಾದ ವಿಚಾರ; ಗ್ರೂಪ್​ ಸದಸ್ಯರ ಪೋಸ್ಟ್​ಗಳಿಗೆ ಸಂಬಂಧಿಸಿದಂತೆ ಮತ್ತದೇ ಆದೇಶ ಪುನರುಚ್ಚಾರ..

    25 ಸಾವಿರಕ್ಕೂ ಅಧಿಕ ಮಾತ್ರೆ ತಿಂದಿದ್ದರೂ ಪ್ರಯೋಜನವಾಗಿಲ್ಲ ಎಂದು ಗುಂಡು ಹೊಡೆದುಕೊಂಡು ಬಿಇಒ ಆತ್ಮಹತ್ಯೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts