More

    ಯರಿಯೂರು ಗ್ರಾಮಸ್ಥರ ಪ್ರತಿಭಟನೆ

    ಯಳಂದೂರು: ತಾಲೂಕಿನ ಯರಿಯೂರು ಗ್ರಾಮದಲ್ಲಿರುವ ಕೆನರಾ ಬ್ಯಾಂಕ್ ಶಾಖೆಯನ್ನು ಯಳಂದೂರು ಪಟ್ಟಣದ ಮುಖ್ಯ ಶಾಖೆಯೊಂದಿಗೆ ವಿಲೀನಗೊಳಿಸುತ್ತಿರುವ ಕ್ರಮ ಖಂಡಿಸಿ ಯರಿಯೂರು ಗ್ರಾಮಸ್ಥರು ಹಾಗೂ ಗ್ರಾಹಕರು ಶನಿವಾರ ಬ್ಯಾಂಕಿನ ಮುಂಭಾಗ ಪ್ರತಿಭಟನೆ ನಡೆಸಿದರು.


    ಮುಖಂಡ ಜೆ. ಮಹೇಶ್ ಮಾತನಾಡಿ, 2017ರಲ್ಲಿ ಆರ್‌ಬಿಐನ ನಿಯಮಗಳಿಗನುಸಾರ ಯರಿಯೂರು ಗ್ರಾಮದಲ್ಲಿ ಸಿಂಡಿಕೇಟ್ ಬ್ಯಾಂಕ್ ಸ್ಥಾಪನೆಯಾಯಿತು. ಈ ಬ್ಯಾಂಕ್ ಆರಂಭಗೊಂಡ ನಂತರ ಇಲ್ಲಿ ಉತ್ತಮ ವಹಿವಾಟು ನಡೆಸುತ್ತಿದೆ. 2 ಸಾವಿರ ಗ್ರಾಹಕರನ್ನು ಬ್ಯಾಂಕ್ ಹೊಂದಿದೆ. ನಂತರ ಕೇಂದ್ರ ಸರ್ಕಾರ ಹಲವು ಬ್ಯಾಂಕ್‌ಗಳನ್ನು ವಿಲೀನಗೊಳಿಸಿದ ನಂತರ ಈ ಬ್ಯಾಂಕ್ ಕೆನರಾ ಬ್ಯಾಂಕ್ ಆಗಿ ಪರಿವರ್ತನೆಗೊಂಡಿತು. ನಂತರ ಇಲ್ಲಿ ಇನ್ನಷ್ಟು ಉತ್ತಮ ವಹಿವಾಟು ಆರಂಭಗೊಂಡಿತು. ಆದರೆ ಈಗ ಇದ್ದಕ್ಕಿದ್ದಂತೆ ಈ ಶಾಖೆಯನ್ನು ಪಟ್ಟಣದ ಕೆನರಾ ಬ್ಯಾಂಕ್ ಮುಖ್ಯ ಶಾಖೆಗೆ ವಿಲೀನಗೊಳಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಆದರೆ ಇದು ಇನ್ನು ಅಪೂರ್ಣವಾಗಿದೆ. ಗ್ರಾಮಸ್ಥರು ಈಗ ಬ್ಯಾಂಕಿನಲ್ಲಿ ಖಾತೆ ಹೊಂದಿದ್ದಾರೆ. ಸರ್ಕಾರದ ಅನೇಕ ಯೋಜನೆಗಳ ಹಣ ಬ್ಯಾಂಕಿಗೆ ನೇರವಾಗಿ ವರ್ಗಾವಣೆಯಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಬ್ಯಾಂಕ್ ಇರುವುದರಿಂದ ವಹಿವಾಟು ಸುಲಭವಾಗುತ್ತದೆ. ಆದರೆ ಇದನ್ನು ವಿಲೀನಗೊಳಿಸಿದರೆ ಪಟ್ಟಣಕ್ಕೆ ತೆರಳಿ ಅಲ್ಲಿ ವ್ಯವಹಾರ ಮಾಡಲು ಕಷ್ಟವಾಗುತ್ತದೆ. ಅಲ್ಲದೆ ಗ್ರಾಹಕರ ಸಂಖ್ಯೆ ಅಧಿಕವಾಗುವುದರಿಂದ ಗಂಟೆಗಟ್ಟಲೇ ಕಾಯುವ ಸ್ಥಿತಿ ನಿರ್ಮಾಣವಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.


    ಪಟ್ಟಣ ಮುಖ್ಯ ಶಾಖೆಗೆ ಗ್ರಾಮದ ಶಾಖೆಗೆ ವಿಲೀನವಾದರೆ ಬ್ಯಾಂಕ್ ವ್ಯವಹಾರಕ್ಕಾಗಿ ಗ್ರಾಮೀಣ ಕೂಲಿ ಕಾರ್ಮಿಕರು ತಮ್ಮ ಕೂಲಿಯನ್ನು ಬಿಟ್ಟು ಅರ್ಧದಿನ ಇದಕ್ಕೆ ಮೀಸಲಾಗಿಡುವ ಸ್ಥಿತಿ ನಿರ್ಮಾಣವಾಗುತ್ತದೆ. ಅಲ್ಲದೆ ವೃದ್ಧರು ಹಾಗೂ ಮಹಿಳೆಯರು, ಅಂಗವಿಕಲರಿಗೆ ಹೆಚ್ಚಿನ ತೊಂದರೆಯಾಗುತ್ತದೆ. ಗ್ರಾಮೀಣ ಭಾಗದಲ್ಲಿ ಶಾಖೆ ಸ್ಥಾಪನೆ ಕಷ್ಟದ ಕೆಲಸ. ಆದರೆ ಇಲ್ಲಿರುವ ಶಾಖೆಯನ್ನು ಮುಖ್ಯ ಶಾಖೆಗೆ ವಿಲೀನಗೊಳಿಸುತ್ತಿರುವ ಕ್ರಮ ಖಂಡನಾರ್ಹ. ಹಾಗಾಗಿ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಈ ಪ್ರಕ್ರಿಯೆ ಕೈಬಿಡಬೇಕು. ಈ ಬಗ್ಗೆ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಹಾಗೂ ಜಿಲ್ಲಾಧಿಕಾರಿಗೂ ಮನವಿ ಸಲ್ಲಿಸಲಾಗುವುದು. ಈ ಪ್ರಕ್ರಿಯೆ ನಿಲ್ಲಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ಹೋರಾಟ ತೀವ್ರಗೊಳಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

    ಜಿಪಂ ಮಾಜಿ ಉಪಾಧ್ಯಕ್ಷ ಜೆ.ಯೋಗೇಶ್, ರಮೇಶ್, ಗೋವಿಂದಶೆಟ್ಟಿ, ಆನಂದ್, ಅಂಗಡಿ ಮಹೇಶ್, ಮಹದೇವಶೆಟ್ಟಿ, ಜಯಣ್ಣ, ರತ್ನಮ್ಮ, ಮಹದೇವಮ್ಮ ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆಗಳ ಸದಸ್ಯರು, ಮಹಿಳಾ ಸಂಘದ ಪದಾಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts