ಬೆಂಗಳೂರು: ಪರಮಪೂಜ್ಯ ಶ್ರೀ ಸ್ವಾಮಿ ಶಿವಾತ್ಮಾನಂದ ಸರಸ್ವತಿ (56) ಅವರು ಬೆಂಗಳೂರು ಅಪೊಲೊ ಆಸ್ಪತ್ರೆಯಲ್ಲಿ ಇಂದು ಬೆಳಿಗ್ಗೆ ನಿಧನರಾದರು.
ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಗ್ರಾಮದ ಜ್ಞಾನಾನಂದ ಆಶ್ರಮದ ಪೀಠಾಧಿಕಾರಿಯಾಗಿದ್ದ ಸ್ವಾಮೀಜಿ ಇತ್ತೀಚಿಗೆ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಿಸದೇ ಇಂದು ಇಹಲೋಕ ತ್ಯಜಿಸಿದ್ದಾರೆ.
1965 ಫೆಬ್ರವರಿ 15ರಂದು ಖ್ಯಾತ ಲೇಖಕರಾದ ಶ್ರೀ ಜೀವಣ್ಣ ಮಸಳಿಯವರ ದ್ವಿತೀಯ ಪುತ್ರರಾಗಿ ಜನಿಸಿದ ಶ್ರೀಗಳ ಪೂರ್ವಾಶ್ರಮದ ಹೆಸರು ಕರುಣಾಕರ. ಇವರ ವಿದ್ಯಾಭ್ಯಾಸವು ಧಾರವಾಡದಲ್ಲಿ ನಡೆಯಿತು. ಪತ್ರಿಕೋದ್ಯಮ ಪದವಿ ನಂತರ ಸಂಯುಕ್ತ ಕರ್ನಾಟಕ ಪತ್ರಿಕೆಗೆ ಉಪ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.
ಫ್ರೆಂಚ್, ಇಂಗ್ಲೀಷ್, ಸಂಸ್ಕೃತ, ಹಿಂದಿ, ತಮಿಳು, ತೆಲುಗು, ಕನ್ನಡ ,ಮರಾಠಿ, ಭಾಷೆಯಲ್ಲಿ ಅಪಾರ ಪಾಂಡಿತ್ಯ ಸಾಧಿಸಿದ್ದರು. ನಂತರ ಆಧ್ಯಾತ್ಮದತ್ತ ಆಕರ್ಷಿತರಾಗಿ ಇತ್ತೀಚೆಗೆ ಬ್ರಹ್ಮೈಕ್ಯರಾದ ಹೃಷಿಕೇಶದ ಸ್ವಾಮಿ ದಯಾನಂದ ಸರಸ್ವತಿಯವರಲ್ಲಿ ಶಿಷ್ಯತ್ವವನ್ನು ಸ್ವೀಕರಿಸಿ, ವೇದ-ವೇದಾಂಗ ಉಪನಿಷತ್ ಭಗವದ್ಗೀತೆಗಳ ಬಗ್ಗೆ ಆಳವಾದ ಅಧ್ಯಯನ ಮಾಡಿದರು. ನಂತರ ಕರ್ನಾಟಕಕ್ಕೆ ಹಿಂದಿರುಗಿ ಹುಲಿಯೂರುದುರ್ಗದ ದೀಪಾಂಬುಧಿ ಕ್ಷೇತ್ರದ ಶ್ರೀ ಕಾಳಿಕಾಂಬ ದೇವಾಲಯದಲ್ಲಿ ಧರ್ಮಾಧಿಕಾರಿಗಳಾಗಿ ಸೇವೆಸಲ್ಲಿಸುತ್ತಾ ದೇವಸ್ಥಾನದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದರು.
2012ರ ಮಾರ್ಚ್ 24ರಂದು ಅರೇಮಾದನಹಳ್ಳಿ ವಿಶ್ವಬ್ರಾಹ್ಮಣ ಮಹಾಸಂಸ್ಥಾನ ಮಠದ ಶ್ರೀ ಶ್ರೀ ಶ್ರೀ ಶಿವಸುಜ್ಞಾನ ತೀರ್ಥ ಮಹಾಸ್ವಾಮಿಗಳಿಂದ ಸನ್ಯಾಸತ್ವ ಸ್ವೀಕಾರ ಮಾಡಿ ಸ್ವಾಮಿ ಶಿವಾನಂದಸರಸ್ವತಿಗಳು ಎಂಬ ಯತಿನಾಮ ಪಡೆದರು. ಆನಂತರ ಚಿಕ್ಕಬಳ್ಳಾಪುರದ ನಂದಿ ಬೆಟ್ಟದ ತಪ್ಪಲಿನಲ್ಲಿರುವ ಜ್ಞಾನಾನಂದ ಆಶ್ರಮ ಎನ್ನುವ ಗುಹೆಯಲ್ಲಿ ವಾಸ್ತವ್ಯ ಆರಂಭಿಸಿ, ಜಿಜ್ಞಾಸುಗಳಿಗೆ ವೇದಾಂತ ಭಗವದ್ಗೀತೆಗಳ ಜ್ಞಾನವನ್ನು ಧಾರೆ ಎರೆಯುತ್ತಿದ್ದರು.
ಕರ್ನಾಟಕ ಮಾತ್ರವಲ್ಲದೆ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಮಧ್ಯಪ್ರದೇಶ, ಗೋವಾ, ಉತ್ತರಾಖಂಡದ ರಿಷಿಕೇಶ, ದೆಹಲಿ, ನೇಪಾಳ ಮುಂತಾದ ಕಡೆ ಆಧ್ಯಾತ್ಮಿಕ ಉಪನ್ಯಾಸಗಳನ್ನು ನೀಡಿ ವೈಶ್ವಕರ್ಮಣ ಸಾಹಿತ್ಯ ಜಗತ್ತಿಗೆ ಪ್ರಚಾರ ಪಡಿಸುವಲ್ಲಿ ಮಹತ್ವದ ಕಾರ್ಯವನ್ನು ಮಾಡಿದ್ದಾರೆ. ಇವರ ಸಾಧನೆಗೆ ಸಂದ "ರಾಷ್ಟ್ರಸಂತ "ಎಂಬ ಬಿರುದು ಅನ್ವರ್ಥವಾಗಿದೆ.
"ದ ಯುನಿವರ್ಸಲ್ ಟ್ರೂಥ್ " ಎನ್ನುವ ಇಂಗ್ಲಿಷ್ ಗ್ರಂಥವನ್ನು ಬರೆದು ಇಡೀ ಜಗತ್ತಿನ ಎಲ್ಲಾ ವಿದ್ವಾಂಸರು ವೈಶ್ವಕರ್ಮಣ ಸಾಹಿತ್ಯವನ್ನು ತಿಳಿಯುವಂತೆ ಮಾಡಿದ್ದಾರೆ. ಆಧ್ಯಾತ್ಮ ಹಾಗೂ ವೈಚಾರಿಕತೆಯ ಸಮನ್ವಯ ಸಾಧಿಸಿ, ನಿರರ್ಗಳವಾಗಿ ವಿಚಾರಧಾರೆಯನ್ನು ಹರಿಸುತ್ತಾ, ಎಲ್ಲರೊಂದಿಗೆ ಸರಳವಾಗಿ ಬೆರೆಯುತ್ತಿದ್ದರು. ಅಲ್ಲದೆ ವಿಶ್ವಕರ್ಮ ತತ್ವವನ್ನು ಆಧರಿಸಿ "ಬ್ರಹ್ಮಸೂತ್ರಕ್ಕೆ" ಭಾಷ್ಯವನ್ನು ಬರೆದು ಲೋಕಾರ್ಪಣೆ ಗೊಳ್ಳುವಂತಹ ಸಂದರ್ಭದಲ್ಲಿ ಶ್ರೀಗಳು ನಮ್ಮನ್ನು ಅಗಲಿರುವುದು ವಿಶ್ವಕರ್ಮ ಸಮಾಜಕ್ಕೆ, ಸಾಹಿತ್ಯಲೋಕಕ್ಕೆ ಹಾಗೂ ಆಧ್ಯಾತ್ಮ ಕ್ಷೇತ್ರಕ್ಕೆ ಬಹುದೊಡ್ಡ ಆಘಾತ. ಭರಿಸಲಾರದ ನಷ್ಟ.