

ಬೀಜಿಂಗ್: ಇಂದು ಬಹುತೇಕರು ತಮ್ಮ ಸ್ಮಾರ್ಟ್ಫೋನ್ಗಳಲ್ಲಿ ಫೇಶಿಯಲ್ ರೆಕಗ್ನಿಷನ್ ಅಥವಾ ಫಿಂಗರ್ ಪ್ರಿಂಟ್ ಅನ್ನೇ ಪಾಸ್ವರ್ಡ್ಗಿಂತ ಹೆಚ್ಚು ಆಯ್ಕೆ ಮಾಡಿಕೊಂಡಿರುತ್ತಾರೆ. ಪಾಸ್ವರ್ಡ್ ನಮೂದಿಸುವ ಸಮಯಕ್ಕಿಂತ ವೇಗವಾಗಿ ಮೊಬೈಲ್ ಒಳಗೆ ಲಾಗಿನ್ ಆಗಲು ಈ ವಿಧಾನಗಳನ್ನು ಹೆಚ್ಚಾಗಿ ಬಳಸುತ್ತಾರೆ. ಆದರೆ, ಕೆಲವೊಮ್ಮೆ ಈ ವಿಧಾನ ಎಂತಹ ಸಮಸ್ಯಗೆ ತಂದೊಡ್ಡಬಹುದು ಎನ್ನುವುದಕ್ಕೆ ಚೀನಾದಲ್ಲಿ ನಡೆದ ಈ ಒಂದು ಘಟನೆ ತಾಜಾ ಉದಾಹರಣೆ ಆಗಿದೆ.
ಫೇಶಿಯಲ್ ರೆಕಗ್ನಿಷನ್ ಬಳಸಿ ಮಾಜಿ ಗರ್ಲ್ಫ್ರೆಂಡ್ ಅಕೌಂಟ್ನಿಂದ ಲಕ್ಷಾಂತರ ರೂಪಾಯಿ ಹಣವನ್ನು ದೋಚಿ ಇದೀಗ ಪ್ರಿಯಕರ ಜೈಲು ಪಾಲಾಗಿರುವ ಘಟನೆ ಬೆಳಕಿಗೆ ಬಂದಿದೆ. ಪ್ರೇಯಸಿ ಮಲಗಿದ್ದ ವೇಳೆ ಆಕೆಯ ಮೊಬೈಲ್ ತೆಗೆದುಕೊಂಡು ಫೇಶಿಯಲ್ ಸ್ಕ್ಯಾನ್ ಮಾಡಿ ಆಕೆಯ ಬ್ಯಾಂಕ್ ಖಾತೆಯಿಂದ ಬರೋಬ್ಬರಿ 18 ಲಕ್ಷವನ್ನು ಪ್ರಿಯಕರ ದೋಚಿದ್ದ. ಅಷ್ಟೇ ಬೇಗನೇ ಪ್ರೇಯಸಿ ಕೈಗೆ ಸಿಕ್ಕಿಬಿದ್ದ ಪ್ರಿಯಕರು ಇದೀಗ ಮೂರೂವರೆ ವರ್ಷಗಳ ಕಾಲ ಜೈಲು ಶಿಕ್ಷೆಗೆ ಗುರಿಯಾಗಿದ್ದಾನೆ.
ಫೇಶಿಯಲ್ ರೆಕಗ್ನಿಷನ್ ಸರಿಯಾಗಿ ಕೆಲಸ ಮಾಡಲು ಮಾಜಿ ಗರ್ಲ್ಫ್ರೆಂಡ್ನ ಕಣ್ಣಿನ ರೆಪ್ಪೆಗಳನ್ನು ಮೇಲೆತ್ತಿ ಕಣ್ಣುಗಳನ್ನು ಕಾಣುವಂತೆ ಮಾಡಿದ್ದಾನೆ. ಸಿಕ್ಕಿಹಾಕಿಕೊಂಡ ಆರೋಪಿಯನ್ನು ಚೀನಾದ ನಾನ್ನಿಂಗ್ ನಗರದ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆರೋಪಿಯ ವಯಸ್ಸು 28 ವರ್ಷ. ಆಕೆಯ ಅಲಿಪೇ ಅಕೌಂಟ್ ತೆರೆಯಲು ಮಾಜಿ ಪ್ರೇಯಸಿಯ ಫೇಶಿಯಲ್ ರೆಕಗ್ನಿಷನ್ ಬಳಸಿಕೊಂಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಆರೋಪಿಯನ್ನು ಆತನ ಕುಟುಂಬದ ಮೂಲ ಹೆಸರು ಹುವಾಂಗ್ ಎಂದು ಗುರುತಿಸಲಾಗಿದೆ. ಫೇಶಿಯಲ್ ರೆಕಗ್ನಿಷನ್ಗೂ ಮುನ್ನ ಆರೋಪಿ ಮೊಬೈಲ್ ಫೋನ್ ಲಾಗಿನ್ ಆಗಲು ಫಿಂಗರ್ ಪ್ರಿಂಟ್ ಉಪಯೋಗಿಸಿದ್ದಾನೆ.
ಅಲಿಪೇ ಅಕೌಂಟ್ಗೆ ಲಾಗಿನ್ ಆಗುತ್ತಿದ್ದಂತೆ ಆಕೆಯ ಪಾಸ್ವರ್ಡ್ ಅನ್ನು ಬದಲಾಯಿಸಿ ಖಾತೆಯಲ್ಲಿದ್ದ 18 ಲಕ್ಷ ರೂಪಾಯಿ ಹಣವನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ. ಜೂಜಾಟಕ್ಕೆ ಸಾಕಷ್ಟು ಸಾಲು ಮಾಡಿ ಹತಾಶೆಗೆ ಒಳಗಾಗಿ ಈ ಕೆಲಸ ಮಾಡಿದ್ದಾನೆಂದು ತಿಳಿದುಬಂದಿದೆ. ಕಾರಣ ಏನೇ ಇದ್ದರೂ ನಮ್ಮವರನ್ನೇ ನಾವು ಕೆಲವೊಮ್ಮೆ ನಂಬಲು ಸಾಧ್ಯವಾಗುವುದಿಲ್ಲ. ಅದರಲ್ಲೂ ಇಂದಿನ ಡಿಜಿಟಲ್ ಯುಗದಲ್ಲಿದ್ದರೂ ನಮ್ಮ ಹಣಕ್ಕೆ ಭದ್ರತೆ ಇಲ್ಲ ಎಂಬುದು ಈ ಘಟನೆಯಿಂದ ಗೊತ್ತಾಗುತ್ತದೆ. (ಏಜೆನ್ಸೀಸ್)