ಜಿಲ್ಲೆ

ಹಂತಕರಿಂದ ಪ್ರವೀಣ್​​ ಕನಸು ನುಚ್ಚುನೂರು: ಕನಸು ಸಾಕಾರಕ್ಕೆ ಸಿದ್ಧತೆ ನಡೆಯುತ್ತಿದ್ದ ಸ್ಥಳದಲ್ಲೇ ಅಂತ್ಯಸಂಸ್ಕಾರ

ಮಂಗಳೂರು: ಬಿಜೆಪಿ ಯುವ ಮುಖಂಡ ಪ್ರವೀಣ್​ ನೆಟ್ಟಾರ್​ ಹತ್ಯೆ ಹಿನ್ನೆಲೆಯಲ್ಲಿ ಬೆಳ್ಳಾರೆಯಲ್ಲಿ ಪರಿಸ್ಥಿತಿ ಉದ್ವಿಘ್ನಗೊಂಡಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ನಾಳೆ ಮಧ್ಯರಾತ್ರಿ 12 ಗಂಟೆವರೆಗೂ 144 ಸೆಕ್ಷನ್ ವಿಧಿಸಲಾಗಿದೆ.

ಮಂಗಳೂರು ಹೊರತುಪಡಿಸಿ ಜಿಲ್ಲೆಯ ಎಲ್ಲಾ ವ್ಯಾಪ್ತಿಯಲ್ಲೂ 144 ಸೆಕ್ಷನ್​ ಜಾರಿಯಲ್ಲಿರಲಿದೆ. ಪುತ್ತೂರು, ಸುಳ್ಯ, ಕಡಬ, ಬೆಳ್ತಂಗಡಿ ಹಾಗೂ ಬಂಟ್ವಾಳ ತಾಲೂಕು ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಇರಲಿದೆ. ಮುಂಜಾಗ್ರತ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರು 144 ಸೆಕ್ಷನ್​ ಜಾರಿ ಮಾಡಿದ್ದು, 5 ಕ್ಕಿಂತ ಹೆಚ್ಚು ಜನ ಗುಂಪು ಸೇರುವಂತಿಲ್ಲ.

ಪ್ರವೀಣ್​ ಕನಸು ನುಚ್ಚುನೂರು

ಹತ್ಯೆಯಾದ ಪ್ರವೀಣ್​, ಮೂರು ವರ್ಷಗಳ ಹಿಂದಷ್ಟೇ ಮದುವೆಯಾಗಿದ್ದ. ಅಲ್ಲದೆ, ಎರಡು ದಿನಗಳ ಹಿಂದಷ್ಟೇ ಹೆಂಡತಿಯ ಹುಟ್ಟುಹಬ್ಬ ಆಚರಿಸಿದ್ದ. ಜೀವನದ ಬಗ್ಗೆ ಸಾಕಷ್ಟು ಕನಸು ಕಂಡಿದ್ದ. ಅದರಲ್ಲಿ ಪ್ರಮುಖವಾಗಿ ಹೊಸ ಮನೆ ಕಟ್ಟಬೇಕೆಂಬ ಕನಸು ಕಟ್ಟಿಕೊಂಡಿದ್ದ. ಅದಕ್ಕಾಗಿ ಜಾಗ ಸಮತಟ್ಟು ಮಾಡುವ ಕೆಲಸವು ನಡೆದಿತ್ತು. ದುರಂತ ಅಂದ್ರೆ ಸಮತಟ್ಟು ಮಾಡಿದ ಜಾಗದಲ್ಲೇ ಪ್ರವೀಣ್ ಅಂತಿಮ ಸಂಸ್ಕಾರ ನಡೆದಿದೆ. ಇದೀಗ ಪ್ರವೀಣ್ ಸಾವಿನಿಂದ ಇಡೀ ಕುಟುಂಬ ಆಘಾತಕ್ಕೆ ಒಳಗಾಗಿದೆ.

ಹಂತಕರ ಬೆನ್ನತ್ತಿರುವ ಖಾಕಿ ಪಡೆ

ಪ್ರವೀಣ್ ಹಂತಕರ ಪತ್ತೆಗೆ ನಾಲ್ಕು ಪೊಲೀಸ್​ ತಂಡಗಳನ್ನು ರಚಿಸಲಾಗಿದೆ. ಮೊನ್ನೆ ಹಗಲಿಡಿ ಬೆಳ್ಳಾರೆ ಪೇಟೆಯಲ್ಲಿ ಕೇರಳ ನೋಂದಣಿಯ ವಾಹನಗಳು ಹೆಚ್ಚಾಗಿ ಓಡಾಡುತ್ತಿದ್ದವು. ಅನಾಹುತದ ಬಗ್ಗೆ ಪ್ರವೀಣ್​ ಮೊದಲೇ ಎಚ್ಚರಿಕೆ ವಹಿಸಿದ್ದರು ಎನ್ನಲಾಗಿದೆ. ಅಂಗಡಿ ಮುಂದೆ ಬೈಕ್ ಬಂದು ನಿಲ್ಲುತ್ತಿದ್ದಂತೆ ಪಕ್ಕದ ಅಂಗಡಿಗೆ ಹೋಗಲು ಪ್ರವೀಣ್​ ಮುಂದಾಗಿದ್ದರು. ಅಂಗಡಿಯಿಂದ ಹೊರಬಂದು ತಪ್ಪಿಸಿಕೊಳ್ಳುವ ಸಂದರ್ಭದಲ್ಲಿ ದುಷ್ಕರ್ಮಿಗಳ‌ ದಾಳಿ ನಡೆಸಿ, ಕೊಂದಿದ್ದಾರೆ. ಹತ್ಯೆಗೂ ಮೊದಲು ರೌಂಡ್ಸ್ ಹಾಕಿ ಹೊಂಚು ಹಾಕುತ್ತಿದ್ದರು ಎಂದು ಹೇಳಲಾಗಿದೆ.

15 ಜನರು ವಶಕ್ಕೆ

ಸಿ.ಸಿ ಕ್ಯಾಮೆರಾದ ದೃಶ್ಯಾವಳಿ ಆಧಾರದಲ್ಲಿ ಪ್ರವೀಣ್​ ಹತ್ಯೆಯ ತನಿಖೆ ನಡೆಸಲಾಗುತ್ತಿದೆ. ಈಗಾಗಲೇ 15 ಜನರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ಸಂದರ್ಭ ಕೊಲೆಗೆ ಮೂರು ಕಾರಣ ಇರುವ ಬಗ್ಗೆ ಪೊಲೀಸರಿಗೆ ಶಂಕೆ ವ್ಯಕ್ತವಾಗಿದೆ. ಸಾಕ್ಷ್ಯಾಧಾರಗಳ ಆಧಾರದ ಮೇಲೆ ಪೊಲೀಸರು ಕಾರಣವನ್ನು ಖಚಿತಪಡಿಸಿಕೊಳ್ಳಲ್ಲಿದ್ದಾರೆ. ಆರೋಪಿಗಳ ಬಂಧನ ಬಳಿಕ‌ ಪ್ರವೀಣ್ ಹತ್ಯೆಯ ಕಾರಣ ಸ್ಪಷ್ಟವಾಗಲಿದೆ. ವಶಕ್ಕೆ ಪಡೆದಿರುವವರಲ್ಲಿ ಸ್ಥಳೀಯರು ಸಹ ಇರುವ ಮಾಹಿತಿ ಇದೆ. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.‌ (ದಿಗ್ವಿಜಯ ನ್ಯೂಸ್​)