ಬೆಂಗಳೂರು: ಕಾಲೇಜು ಕ್ಯಾಂಪಸ್‌ನಲ್ಲಿ ಆತ್ಮಹತ್ಯೆ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ನಗರದಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ)ಯ ಅಧಿಕಾರಿಗಳು ಹಾಸ್ಟೆಲ್ ರೂಮ್ಗಳಲ್ಲಿರುವ ಸೀಲಿಂಗ್ ಫ್ಯಾನ್ಗಳನ್ನು ತೆರವುಗೊಳಿಸುತ್ತಿರುವುದಾಗಿ ವಿದ್ಯಾರ್ಥಿಗಳು ಮಾಹಿತಿ ನೀಡಿದ್ದಾರೆ.
ಕಳೆದ ಎರಡು ವರ್ಷದಲ್ಲಿ ಕ್ಯಾಂಪಸ್ ಒಳಗೆ ಆರು ಆತ್ಮಹತ್ಯೆ ಪ್ರಕರಣಗಳು ವರದಿಯಾಗಿದ್ದು, ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಗ್ಗಿಸುವ ನಿಟ್ಟಿನಲ್ಲಿ ಫ್ಯಾನ್ಗಳನ್ನು ತೆಗೆಯುವ ನಿರ್ಧಾರ ಮಾಡಿದ್ದಾರೆಂದು ತಿಳಿದುಬಂದಿದೆ.
ಹಾಸ್ಟೆಲ್ನಲ್ಲಿ ಸೀಲಿಂಗ್ ಫ್ಯಾನ್ಗಳನ್ನು ತೆಗೆದು ಅದರ ಬದಲಾಗಿ ನೇರವಾಗಿ ಗೋಡೆಗೆ ಅಳವಡಿಸಬಹುದಾದಂತಹ ವಾಲ್ ಮೌಂಟೆಡ್ ಫ್ಯಾನ್ಗಳನ್ನು ಹಾಕುತ್ತಿದ್ದಾರೆ ಎಂದು ಅಲ್ಲಿನ ವಿದ್ಯಾರ್ಥಿಗಳು, ವಿದ್ಯಾರ್ಥಿ ಮಂಡಳಿಯ ಮುಖ್ಯಸ್ಥರಿಗೆ ಈಮೇಲ್ ಮಾಡಿ ತಿಳಿಸಿದ್ದಾರೆ. 15 ದಿನಗಳ ಒಳಗೆ ಐಐಎಸ್ಸಿ ಕ್ಯಾಂಪಸ್ ಒಳಗಿರುವ ಹಾಸ್ಟೆಲ್ಗಳಲ್ಲಿನ ಎಲ್ಲ ಸೀಲಿಂಗ್ ಫ್ಯಾನ್ಗಳನ್ನು ತೆಗೆಯುವುದಾಗಿ ಕಾರ್ಮಿಕರು ಹೇಳಿದ್ದಾರೆಂದು ವಿದ್ಯಾರ್ಥಿಗಳು ಈಮೇಲ್ನಲ್ಲಿ ಉಲ್ಲೇಖಿಸಿದ್ದಾರೆ.
ಸೀಲಿಂಗ್ ಫ್ಯಾನ್ ತೆಗೆಯುವ ನಿರ್ಧಾರ ಸರಿಯೇ ಎಂಬುದರ ಬಗ್ಗೆ ಸಮೀಕ್ಷೆಯೊಂದು ನಡೆದಿದ್ದು, ಶೇ. 89 ವಿದ್ಯಾರ್ಥಿಗಳು ಇದನ್ನು ವಿರೋಧಿಸಿದ್ದಾರೆ. ಉಳಿದ ವಿದ್ಯಾರ್ಥಿಗಳು ಈ ನಿರ್ಧಾರದ ಬಗ್ಗೆ ಚಿಂತೆಯೂ ಮಾಡಿಲ್ಲ. ವಿದ್ಯಾರ್ಥಿಗಳು ನಡೆಸಿದ ಸಮೀಕ್ಷೆಯನ್ನು ವಿದ್ಯಾರ್ಥಿ ಮಂಡಳಿಯ ಮುಖ್ಯಸ್ಥರಿಗೆ ಈಮೇಲ್ ಜತೆಗೆ ಲಗತ್ತಿಸಲಾಗಿದೆ. ಫ್ಯಾನ್ ಬದಲಿಸುವುದರಿಂದ ಆತ್ಮಹತ್ಯೆಯನ್ನು ತಡೆಯಲಾಗದು ಎಂಬುದು ಶೇ. 89 ವಿದ್ಯಾರ್ಥಿಗಳ ಅಭಿಪ್ರಾಯವೂ ಆಗಿದೆ.
ಐಐಎಸ್ಸಿ ಮ್ಯಾನೇಜ್ಮೆಂಟ್ ತೆಗೆದುಕೊಂಡಿರುವ ನಿರ್ಧಾರವು ಅವೈಜ್ಞಾನಿಕ ಕ್ರಮವಾಗಿದೆ ಎಂದು ಯುವ ಆಪ್ತ ಸಮಾಲೋಚಕರು ಹಾಗೂ ಸಮುದ್ರ ಫೌಂಡೇಶನ್ನ ಸಿಇಒ ಭಾರತಿ ಸಿಂಗ್ ತಿಳಿಸಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ಏನೆಂಬುದನ್ನು ತಿಳಿದುಕೊಳ್ಳಲು ತಳಮಟ್ಟದಿಂದ ಕೆಲಸ ಮಾಡಬೇಕು. ವಿದ್ಯಾರ್ಥಿಗಳಲ್ಲಿರುವ ಆತಂಕ ನಿವಾರಣೆಗೆ ಸಮಾಲೋಚಕರಿಂದ ಪರಿಹಾರ ಒದಗಿಸುವಂತಹ ಕೆಲಸ ಮಾಡಬೇಕು. ಇಲ್ಲಿ ಓದಿನ ಒತ್ತಡದ ಜತೆಗೆ ವೈಯಕ್ತಿಕ ಕಾರಣವೂ ಇರುತ್ತದೆ. ಅದನ್ನು ಬಿಟ್ಟು ಈ ರೀತಿಯ ನಿರ್ಧಾರ ಸಮಂಜಸವಲ್ಲ ಎಂದು ಹೇಳಿದ್ದಾರೆ.
ವಿದ್ಯಾರ್ಥಿಗಳಿಗೆ ಮಾನಸಿಕ ಆರೋಗ್ಯ ಬೆಂಬಲವನ್ನು ಒದಗಿಸಲು ಕ್ಯಾಂಪಸ್‌ನಲ್ಲಿ ಸ್ಥಾಪಿಸಲಾದ ಕ್ಷೇಮ ಕೇಂದ್ರವು ಪರಿಣಾಮಕಾರಿಯಾಗಿಲ್ಲ ಮತ್ತು ಅದನ್ನು ಸುಧಾರಿಸಲು ಕರೆಗಳು ಬರುತ್ತಿವೆ ಎಂದು ಐಐಎಸ್ಸಿನಲ್ಲಿನ ವಿದ್ಯಾರ್ಥಿ ಪರಿಷತ್ ಸದಸ್ಯರೊಬ್ಬರು ಹೇಳಿದ್ದಾರೆ. (ಏಜೆನ್ಸೀಸ್)