ಜಿಲ್ಲೆ

VIDEO| ಟಾರ್ಗೆಟ್ ರೋಹಿಣಿ ಸಿಂಧೂರಿ ಹಿಂದಿರುವ ಕೈವಾಡವೇನು? ಇಲ್ಲಿದೆ ಸ್ಫೋಟಕ ಮಾಹಿತಿ..!

ಮೈಸೂರು: ಇತ್ತೀಚೆಗೆ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಮೂರು ಪಕ್ಷದ ಜನಪ್ರತಿನಿಧಿಗಳು ತೀವ್ರ ವಾಗ್ದಾಳಿ ನಡೆಸುತ್ತಿರುವುದು ಸಾಮಾನ್ಯವಾಗಿದೆ. ಪ್ರತಿನಿತ್ಯ ಒಬ್ಬರಲ್ಲ ಒಬ್ಬರು ಡಿಸಿ ವಿರುದ್ಧ ಗರಂ ಆಗಿ ಆರೋಪಗಳ ಸುರಿಮಳೆಗೈಯುತ್ತಿದ್ದಾರೆ. ಹಾಗಾದ್ರೆ, ರೋಹಿಣಿ ಸಿಂಧೂರಿ ಅವರು ಜನಪ್ರತಿನಿಧಿಗಳಿಗೆ ಟಾರ್ಗೆಟ್​ ಆಗಲು ಕಾರಣ ಏನಿರಬಹುದೆಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ.

ರೋಹಿಣಿ ಅವರ ಕಾರ್ಯವೈಖರಿ ಕಾರಣನಾ ಅಥವಾ ಬೇರೆ ಕಾರಣ ಇರಬಹುದಾ ಎಂಬ ಸಂಶಯ ವ್ಯಕ್ತವಾಗುತ್ತಿದ್ದು, ಇದರ ನಡುವೆ ಭೂಮಾಫಿಯಾ ಕೈವಾಡ ಶಂಕೆ ಕೇಳಿಬಂದಿದೆ. ಜನಪ್ರತಿನಿಧಿಗಳ ವಿರೋಧದ ಹಿಂದೆ ಕೆಲ ಪಟ್ಟಭದ್ರಾ ಹಿತಾಶಕ್ತಿಗಳ ಕೈವಾಡ ಇದೆ ಎಂಬ ಆರೋಪ ಕೇಳಿಬಂದಿದೆ.

ಹೇಗಾದರೂ ಮಾಡಿ ರೋಹಿಣಿ ಸಿಂಧೂರಿ ಅವರನ್ನು ಮೈಸೂರಿನಿಂದ ವರ್ಗಾವಣೆ ಮಾಡಬೇಕೆನ್ನುವ ನಾಯಕರ ಪ್ರಯತ್ನ ತೆರೆಮರೆಯಲ್ಲಿ ನಡೆಯುತ್ತಿದೆ ಎನ್ನಲಾಗುತ್ತಿದೆ. ಹೀಗಾಗಿ ರೋಹಿಣಿ ಸಿಂಧೂರಿ ವಿರುದ್ಧದ ಆಕ್ರೋಶದ ಹಿಂದೆ ಅನೇಕ ಅನುಮಾನಗಳು ಇದೀಗ ಭುಗಿಲೆದ್ದಿದೆ.

ಇತ್ತೀಚೆಗೆ ರೋಹಿಣಿ ಸಿಂಧೂರಿ ಅವರು ಭೂ ಅಕ್ರಮದ ಫೈಲ್​ಗಳನ್ನು ಓಪನ್​ ಮಾಡಿಸಿದ್ದರು ಎಂದು ತಿಳಿದುಬಂದಿದೆ. ಅದರಿಂದಲೇ ಸಮಸ್ಯೆಯಾಗಿದೆ ಎಂದು ಹೇಳಲಾಗುತ್ತಿದೆ. ಕರೊನಾ ನಡುವೆಯೂ ಅಕ್ರಮದ ದೂರುಗಳಿಗೆ ಸಂಬಂಧಿಸಿದ ಫೈಲ್​ಗಳನ್ನು ವಿಲೇವಾರಿ ಮಾಡುವ ಪ್ರಯತ್ನಕ್ಕೆ ರೋಹಿಣಿ ಸಿಂಧೂರಿ ಕೈಹಾಕಿದ್ದಾರೆಂಬ ಮಾಹಿತಿ ತಿಳಿದುಬಂದಿದೆ.

ಇಷ್ಟೇ ಅಲ್ಲದೆ, ಅಕ್ರಮ ರಿಯಲ್​ ಎಸ್ಟೇಟ್​ ಕುಳಗಳ ಹಿಂದೆಯೂ ರೋಹಿಣಿ ಬಿದ್ದಿದ್ದಾರೆ. ಹೀಗಾಗಿ ಅಕ್ರಮದಲ್ಲಿ ಭಾಗಿಯಾಗಿರುವವರ ಎದೆಯಲ್ಲಿ ನಡುಕು ಶುರುವಾಗಿದ್ದು, ಕ್ರಮಕ್ಕೂ ಮುನ್ನವೇ ಅವರನ್ನು ವರ್ಗಾವಣೆ ಮಾಡಿಸುವ ಪ್ರಯತ್ನ ನಡೆಯುತ್ತಿದೆ ಎಂಬ ಮಾತುಗಳು ಸಹ ಕೇಳಿಬರುತ್ತಿವೆ. (ದಿಗ್ವಿಜಯ ನ್ಯೂಸ್​)