ಜಿಲ್ಲೆ

ಗಂಡನ ಹಣದಾಹಕ್ಕೆ ಮೈಸೂರು ವಿವಿಯ ಗೋಲ್ಡ್​ ಮೆಡಲ್​ ವಿನ್ನರ್​ ಬಲಿ: ಪ್ರೀತಿಸಿ ಮದ್ವೆಯಾದವಳ ದುರಂತ ಅಂತ್ಯ!

ಮೈಸೂರು: ಮೈಸೂರು ವಿಶ್ವವಿದ್ಯಾಲಯದಲ್ಲಿ ಚಿನ್ನದ ಪದಕ ಪಡೆದಿದ್ದ ಗೃಹಿಣಿ ಒಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಕುಟುಂಬಸ್ಥರು ಕೊಲೆ ಎಂದು ಆರೋಪ ಮಾಡಿದ್ದಾರೆ.

ಆಶಾ ಮೃತ ದುರ್ದೈವಿ. ಎಂಟು ವರ್ಷಗಳ ಹಿಂದೆ ಆಶಾ ಪ್ರೀತಿಸಿ‌ ಮದುವೆಯಾಗಿದ್ದರು. ಮದ್ದೂರು ತಾಲೂಕಿನ ಮಡೇನಹಳ್ಳಿ ನಿವಾಸಿಯಾದ ಆಶಾ ಮಳವಳ್ಳಿಯ ನಾಗಪ್ರಸಾದ್ ಎಂಬಾತನನ್ನು ಪ್ರೀತಿಸಿ ಮದುವೆಯಾಗಿದ್ದರು. ದಂಪತಿ ಮೈಸೂರಿನಲ್ಲಿ ವಾಸವಾಗಿದ್ದರು.

ಆಶಾಗೆ ಹಣ‌ ತೆಗೆದುಕೊಂಡು ಬರುವಂತೆ ನಾಗಪ್ರಸಾದ್​, ನಿರಂತರ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಎರಡು ಮೂರು ಬಾರಿ ಪೊಲೀಸ್ ಠಾಣೆಯಲ್ಲಿಯೂ ಪ್ರಕರಣ ದಾಖಲಾಗಿತ್ತು. ದಾಂಪತ್ಯದಲ್ಲಿ ಬಿರುಕು ಮೂಡಿ ಡಿವೋರ್ಸ್ ಹಂತಕ್ಕೂ ಹೋಗಿತ್ತು. ನಂತರ ಕೌಟುಂಬಿಕ ನ್ಯಾಯಾಲಯದಲ್ಲಿ ರಾಜಿ ಮಾಡಲಾಗಿತ್ತು. ಇದಾದ‌ ಬಳಿಕವೂ ನಾಗಪ್ರಸಾದ್​ ಕಿರುಕುಳ ನಿಲ್ಲಿಸಿರಲಿಲ್ಲ ಎಂದು ಆಶಾ ಪಾಲಕರು ಆರೋಪ ಮಾಡಿದ್ದಾರೆ.

ಹಣಕ್ಕಾಗಿ ನಾಗಪ್ರಸಾದ್​ ಕಿರುಕುಳ ದಿನದಿಂದ ದಿನಕ್ಕೆ ಹೆಚ್ಚಾಯಿತು ಎನ್ನಲಾಗಿದೆ. ನಿನ್ನೆಯಷ್ಟೆ ಗಂಡನ ಮನೆ ಬಿಟ್ಟು ಪಿಜಿಯಲ್ಲಿ ಇರುತ್ತೇನೆ ಎಂದು ಹೇಳಿ ಹೋಗಿದ್ದ ಆಶಾ, ನಿನ್ನೆ (ಅ.8) ಸಂಜೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಬಗ್ಗೆ ನಾಗಪ್ರಸಾದ್ ಪಾಲಕರಿಗೆ ಕರೆ ಮಾಡಿ ತಿಳಿಸಿದ್ದಾನೆ. ಆದರೆ, ಇದು ಆತ್ಮಹತ್ಯೆ ಅಲ್ಲ, ಕೊಲೆ ಎಂದು ಆಶಾ ಕುಟುಂಬಸ್ಥರು ದೂರಿದ್ದಾರೆ. ಈ ಸಂಬಂಧ ಮೈಸೂರಿನ ವಿದ್ಯಾರಣ್ಯಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)