ಸಾಂದರ್ಭಿಕ ಚಿತ್ರ 
ಜಿಲ್ಲೆ

ವಿಶ್ವವಿಖ್ಯಾತ ದಸರಾ ಮಹೋತ್ಸವ: ಇಂದು ಗಜ ಪಯಣ ಆರಂಭ, ನಾಡಹಬ್ಬದ ಮೊದಲ ಕಾರ್ಯಕ್ರಮಕ್ಕೆ ಸಿದ್ಧತೆ

ಮೈಸೂರು: ವಿಶ್ವವಿಖ್ಯಾತ ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಈಗಾಗಲೇ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ಸಿದ್ಧತೆ ಆರಂಭವಾಗಿದ್ದು, ಅದರ ಮೊದಲ ಭಾಗವಾಗಿ ಇಂದು ಗಜ ಪಯಣ ಆರಂಭವಾಗಲಿದೆ.

ಗಜಪಡೆಯ ಘನ ಗಾಂಭೀರ್ಯ ನಡಿಗೆ ದಸರಾದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ದಸರಾದಲ್ಲಿ ಪಾಲ್ಗೊಳ್ಳಲಿರುವ ಆನೆಗಳು ಇಂದು ಕಾಡಿನಿಂದ ನಾಡಿಗೆ ಹೊರಡಲಿವೆ. ಇದು ನಾಡ ಹಬ್ಬದ ಮೊದಲ ಅಧಿಕೃತ ಕಾರ್ಯಕ್ರಮವಾಗಿದ್ದು, ಇದಕ್ಕೆ ಬೇಕಾದ ಸಿದ್ಧತೆ ನಡೆದಿದೆ.

ಅಭಿಮನ್ಯು ನೇತೃತ್ವದಲ್ಲಿ ಗಜಪಡೆ ಮೈಸೂರಿಗೆ ಕಾಲಿಡಲಿದೆ. 57 ವರ್ಷದ ಅಭಿಮನ್ಯು, 22 ವರ್ಷದ ಭೀಮ, 38 ವರ್ಷದ ಮಹೇಂದ್ರ ಹಾಗೂ 39 ವರ್ಷದ ಗೋಪಲಸ್ವಾಮಿ, ಬಳ್ಳೆ ಆನೆ ಶಿಬಿರದಿಂದ 63 ವರ್ಷದ ಅರ್ಜುನ. ದುಬಾರೆ ಆನೆ ಶಿಬಿರದಿಂದ‌ 59 ವರ್ಷದ ವಿಕ್ರಮ, 44 ವರ್ಷದ ಧನಂಜಯ, 45 ವರ್ಷದ ಕಾವೇರಿ, 41 ವರ್ಷದ ಗೋಪಿ, 40 ವರ್ಷದ ಶ್ರೀರಾಮ ಹಾಗೂ 63 ವರ್ಷದ ವಿಜಯಾ, ರಾಮಾಪುರ ಆನೆ‌ ಶಿಬಿರದಿಂದ 49 ವರ್ಷದ ಚೈತ್ರಾ, 21 ವರ್ಷದ ಲಕ್ಷ್ಮಿ ಹಾಗೂ‌ 18 ವರ್ಷದ ಪಾರ್ಥಸಾರಥಿ ಆನೆಗಳು ಈ ಬಾರಿಯ ದಸರಾಗೆ ಆಯ್ಕೆಯಾಗಿವೆ.

ಇಂದು ಹುಣಸೂರು ತಾಲೂಕಿನ ವೀರನ ಹೊಸಹಳ್ಳಿಯಿಂದ ಗಜಪಡೆಯ ಮೊದಲ‌ ತಂಡ ಆಗಮಿಸಲಿದೆ. ಮೊದಲ ತಂಡದಲ್ಲಿ 9 ಆನೆಗಳು ಆಗಮಿಸಲಿದ್ದು, ಆತ್ಮೀಯವಾಗಿ ಬರಮಾಡಿಕೊಳ್ಳಲು ಮೈಸೂರಿನಲ್ಲಿ ಸಕಲ ಸಿದ್ಧತೆ ನಡೆದಿದೆ. (ದಿಗ್ವಿಜಯ ನ್ಯೂಸ್​)