More

    ಜವಳಿಗೆ ಬಲ ತುಂಬಲು ಯತ್ನ; ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಮನದಾಳದ ಮಾತು..

    ಬೆಂಗಳೂರು: ಜವಳಿ ಹಾಗೂ ಸಿದ್ಧ ಉಡುಪು ಕ್ಷೇತ್ರದಲ್ಲಿರುವ ವಿಪುಲ ಅವಕಾಶ ಬಳಸಿಕೊಳ್ಳಲು ಸರ್ಕಾರ ಕಟಿಬದ್ಧವಾಗಿದ್ದು, ಈ ದಿಕ್ಕಿನಲ್ಲಿ ಕಾರ್ಯೋನ್ಮುಖವಾಗಿದ್ದೇವೆ ಎಂದು ಜವಳಿ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಆತ್ಮವಿಶ್ವಾಸದಿಂದ ಹೇಳಿಕೊಂಡಿದ್ದಾರೆ. ಕೈಮಗ್ಗ ದಿನಾಚರಣೆ ಹಿನ್ನೆಲೆಯಲ್ಲಿ ವಿಜಯವಾಣಿ ನಡೆಸಿದ ಸಂವಾದದಲ್ಲಿ ತಮ್ಮ ಮನದಿಂಗಿತ ಹಂಚಿಕೊಂಡ ಸಚಿವರು, ಜವಳಿ ಪಾರ್ಕ್​ಗಳ ಸ್ಥಾಪನೆ ಮೂಲಕ ಉದ್ಯೋಗ ಸೃಷ್ಟಿ, ರಾಜ್ಯದ ಉತ್ಪನ್ನಗಳಿಗೆ ಇ- ಮಾರುಕಟ್ಟೆ ವ್ಯವಸ್ಥೆ, ಹೂಡಿಕೆದಾರರ ಸಮಾವೇಶದಂತಹ ಕಾರ್ಯಕ್ರಮ ರೂಪಿಸಲು ಮುಂದಾಗಿರುವುದಾಗಿ ತಿಳಿಸಿದರು. ಸಂವಾದದ ಪೂರ್ಣಪಾಠ ಇಲ್ಲಿದೆ.

    • ಜವಳಿ ನೀತಿ ಅನುಷ್ಠಾನ ಎಷ್ಟು ಪರಿಣಾಮಕಾರಿ, ನೇಕಾರ ಸಮುದಾಯಕ್ಕೆ ಯಾವ ರೀತಿ ಅನುಕೂಲವಾಗುತ್ತಿದೆ?

    ಜವಳಿ ನೀತಿ, ಸಿದ್ಧ ಉಡುಪು ನೀತಿ 2024ರವರೆಗೆ ಜಾರಿಯಲ್ಲಿದ್ದು, ಇದರ ಪ್ರಕಾರ, ಜವಳಿ ಕ್ಷೇತ್ರದ ಬೆಳವಣಿಗೆಗೆ ಸಬ್ಸಿಡಿ ನೀಡುವುದು, ಉದ್ಯೋಗ ಸೃಷ್ಟಿಗೆ ಕ್ರಮ ಸೇರಿ ನೇಕಾರರ ಬೇಡಿಕೆಗಳನ್ನು ಈಡೇರಿಸಲಾಗಿದೆ.

    • ರಾಜ್ಯದ ಎಲ್ಲೆಲ್ಲಿ ಜವಳಿ ಪಾರ್ಕ್ ಸ್ಥಾಪನೆಯಾಗಲಿದೆ? ಅದರ ಮಹತ್ವವೇನು?

    ಜವಳಿ ಉದ್ಯಮಕ್ಕೆ ಪೂರಕವಾದ ಇಕೋ ಸಿಸ್ಟಂ ಅನ್ನು ಜವಳಿ ಪಾರ್ಕ್​ನಲ್ಲಿ ರೂಪಿಸಲಾಗುತ್ತದೆ. ಭೂಮಿ, ವಿದ್ಯುತ್, ನೀರಿನ ವ್ಯವಸ್ಥೆ ಮಾಡಲಾಗುತ್ತದೆ. ಜವಳಿ ನೀತಿ ಪ್ರಕಾರ ಸಬ್ಸಿಡಿ ನೀಡಲಿದ್ದು, ಅನುಮತಿ ಸರಳೀಕರಿಸಲಾಗಿದೆ. ಶಿಗಾವಿಯಲ್ಲಿ ಭೂಮಿ ಪೂಜೆ ನೆರವೇರಿಸಲಾಗಿದೆ. ಶೀಘ್ರವೇ ಕಾರ್ಯಾರಂಭ ಮಾಡಬೇಕೆಂಬ ಉದ್ದೇಶವಿದೆ. ರಾಣೆಬೆನ್ನೂರು, ನವಲಗುಂದದಲ್ಲೂ ಜವಳಿ ಪಾರ್ಕ್ ಸ್ಥಾಪಿಸಲಾಗುತ್ತದೆ. ಕಾರ್ಕಳದಲ್ಲಿ ಜಾಗ ಗುರುತಿಸಬೇಕಿದೆ, ರಾಯಚೂರು, ಚಿಕ್ಕಮಗಳೂರಿನಿಂದಲೂ ಬೇಡಿಕೆ ಇದೆ. ಇನ್ನೂ ಎಲ್ಲೆಲ್ಲಿ ಬೇಡಿಕೆ ಬರುತ್ತದೋ ಅಲ್ಲಿ ಪಿಪಿಪಿ ಮಾದರಿಯಲ್ಲಿ ಸ್ಥಾಪಿಸಲಾಗುತ್ತದೆ. ಉದ್ಯೋಗಾಕಾಂಕ್ಷಿಗಳಿಗೆ 45 ದಿನದ ತರಬೇತಿ ನೀಡಿ, ಅಲ್ಲೇ ಉದ್ಯೋಗ ನೀಡಲಾಗುತ್ತದೆ.

    • ಕೇಂದ್ರದ ಮೆಗಾ ಜವಳಿ ಪಾರ್ಕ್ ತರಲು ರಾಜ್ಯದ ಪ್ರಯತ್ನವೇನಾಗಿದೆ?

    ಕೇಂದ್ರ ಸರ್ಕಾರವು ದೇಶದ ಏಳು ಕಡೆ ಮೆಗಾ ಟೆಕ್ಸ್​ಟೈಲ್ಸ್ ಪಾರ್ಕ್ ಸ್ಥಾಪಿಸಲು ಬಯಸಿದೆ. ಮಿತ್ರಾ ಹೆಸರಿನ ಯೋಜನೆಯನ್ನು ರಾಜ್ಯಕ್ಕೂ ತರಲು ಪ್ರಯತ್ನ ನಡೆದಿದೆ. ಇದರ ಸ್ಥಾಪನೆಗೆ ಒಂದು ಸಾವಿರ ಎಕರೆ ಜಾಗ ಬೇಕಾಗುತ್ತದೆ. ಬಂದರು, ವಿಮಾನ ಸಂಪರ್ಕ, ನೀರಿನ ಹಂಚಿಕೆ ಸೇರಿ ವಿವಿಧ ನಿಯಮಗಳಿವೆ. ಅದನ್ನು ಪಾಲಿಸಬೇಕಾಗುತ್ತದೆ. ರಾಜ್ಯದ ಕಲಬುರಗಿ, ವಿಜಯಪುರ, ಹುಬ್ಬಳ್ಳಿ- ಧಾರವಾಡದಲ್ಲಿ ಸ್ಥಾಪಿಸಬೇಕೆಂಬ ಪ್ರಸ್ತಾವನೆ ಇದೆ. ಒಟ್ಟಾರೆ ಹತ್ತು ಸಾವಿರ ಕೋಟಿ ರೂ. ಹೂಡಿಕೆಯಾಗಲಿದ್ದು ಒಂದು ಲಕ್ಷ ಉದ್ಯೋಗ ಸೃಷ್ಟಿಯಾಗುವುದು.

    • ರಾಜ್ಯದ ಜವಳಿ ಕ್ಷೇತ್ರದಲ್ಲಿ ಈವರೆಗೆ ಎಷ್ಟು ಉದ್ಯೋಗ ಸೃಷ್ಟಿಯಾಗಿದೆ, ಹೊಸ ಪ್ರಯತ್ನದಿಂದ ಎಷ್ಟು ಉದ್ಯೋಗ ಸೃಷ್ಟಿಯಾಗಬಹುದು?

    ಹಾಲಿ ಅಂದಾಜು 12 ಲಕ್ಷದಷ್ಟು ಉದ್ಯೋಗಿಗಳಿದ್ದಾರೆ. ಹೊಸ ಜವಳಿ ಪಾರ್ಕ್​ನಿಂದ ಮತ್ತೆ 2 ಲಕ್ಷದಷ್ಟು ಉದ್ಯೋಗ ಸೃಷ್ಟಿಯಾಗಬಹುದು.

    • ರಾಜ್ಯದ ಸಾಂಪ್ರದಾಯಿಕ ನೇಕಾರರು ಸಂಕಷ್ಟದಲ್ಲಿದ್ದಾರೆ, ಅವರಿಗೆ ಸರ್ಕಾರ ಯಾವ ರೀತಿ ನೆರವಾಗುತ್ತಿದೆ?

    ನೇಕಾರರು ಉಳಿಯಬೇಕು. ಅವರ ನೆರವಿಗಾಗಿ ಎಲ್ಲ ರೀತಿಯ ಪ್ರಯತ್ನ ಮಾಡಲಾಗುತ್ತಿದೆ. ನೇಕಾರರ ಮಕ್ಕಳಿಗೆ ಸ್ಕಾಲರ್​ಶಿಪ್ ಯೋಜನೆ ಆರಂಭಿಸಿದ್ದೇವೆ. ಕೃಷಿ ಸಮ್ಮಾನ್ ಮಾದರಿಯಲ್ಲಿ ನೇಕಾರ ಸಮ್ಮಾನ್ ಯೋಜನೆ ತಂದಿದ್ದು, 50 ಸಾವಿರ ನೇಕಾರರಿಗೆ ವರ್ಷಕ್ಕೊಮ್ಮೆ 5 ಸಾವಿರ ರೂ. ಕೊಡುತ್ತಿದ್ದು, ಗಾರ್ವೆಂಟ್ ವೇಜ್ ದ್ವಿಗುಣಗೊಳಿಸಿದೆ.

    • ಸಿಲ್ಕ್ ಕ್ಲಸ್ಟರ್ ಸ್ಥಾಪನೆ ಪ್ರಸ್ತಾವನೆ ಎಲ್ಲಿಗೆ ಬಂದಿದೆ?

    ಉತ್ತರ ಕರ್ನಾಟಕದವರು ರಾಮನಗರಕ್ಕೆ ಬಂದು ಮಾರಾಟ ಮಾಡುತ್ತಿದ್ದಾರೆ. ಹೀಗಾಗಿ ಹಾವೇರಿಯಲ್ಲಿ ಮಾರುಕಟ್ಟೆ ಮಾಡಲು ಪ್ರಾರಂಭ ಮಾಡುತ್ತಿದ್ದೇವೆ. ಬಳಿಕ ಮುಂದಿನ ಪ್ರಕ್ರಿಯೆಯಲ್ಲಿ ಮೈಸೂರು ಕ್ಲಸ್ಟರ್​ಗೆ ತರುವ ವ್ಯವಸ್ಥೆ ಮಾಡಿ ಉತ್ತೇಜನ ಕೊಡುತ್ತೇವೆ.

    • ಈ ಸಾಂಪ್ರದಾಯಿಕ ಉದ್ದಿಮೆ ಉಳಿಸಿ ಬೆಳೆಸಲು ಮಾರುಕಟ್ಟೆ ನೆರವು ಅತ್ಯಗತ್ಯ. ಯಾವ ರೀತಿ ಸರ್ಕಾರ ನೆರವಿಗೆ ನಿಲ್ಲುತ್ತಿದೆ?

    ಪ್ಲಿಫ್​ಕಾರ್ಟ್ ಜತೆ ಒಡಂಬಡಿಕೆಯಾಗುತ್ತಿದೆ. ಹಾಗೆಯೇ ಪ್ರಮುಖ ಪ್ರವಾಸಿ ಸ್ಥಳ, ತೀರ್ಥಯಾತ್ರೆ ಕ್ಷೇತ್ರದಲ್ಲಿ ಮಳಿಗೆ ಹಾಕಲು ಚರ್ಚೆ ನಡೆಸಲಾಗಿದೆ. ಜಂಗಲ್ ರೆಸಾರ್ಟ್​ನಲ್ಲಿ ಕೂಡ ಪಾಯಿಂಟ್ ಔಟ್ ಮಾಡಿ ಕೊಡಲಾಗಿದೆ. ಮುಂದಿನ ದಿನಗಳಲ್ಲಿ ಅನುಷ್ಟಾನವಾಗಲಿದೆ.

    • ಕೈಮಗ್ಗ ನಿಗಮದ ಪುನಶ್ಚೇತನಕ್ಕೆ ಕ್ರಮಗಳೇನು?

    ಸರ್ಕಾರಿ ಶಾಲೆ ವಿದ್ಯಾರ್ಥಿಗಳ ಸಮವಸ್ತ್ರಕ್ಕೆ ಶೇ.50 ಬಟ್ಟೆಯನ್ನು ನಿಗಮದಿಂದ ಪಡೆಯಬೇಕೆಂದು ಆದೇಶವಿದೆ. ಪೊಲೀಸ್ ಇಲಾಖೆ ಸೇರಿ ಸರ್ಕಾರದ ಯಾವುದೇ ಇಲಾಖೆ ಬಟ್ಟೆ ಖರೀದಿಸುವಾಗ ಶೇ.25 ಅನ್ನು ಇಲ್ಲಿಂದಲೇ ಖರೀದಿಸಬೇಕಾಗುತ್ತದೆ. ಈ ರೀತಿ ಕ್ರಮದಿಂದ ನೇಕಾರರಲ್ಲಿ ವಿಶ್ವಾಸ ಮೂಡಿಸಲು ಸಾಧ್ಯ.

    • ಕ್ಷೇತ್ರಕ್ಕೆ ಪೂರಕವಾಗಿ ಆಗಬೇಕಾದ ಬದಲಾವಣೆ ಏನು?

    ರಾಜ್ಯದಲ್ಲಿ ಬೆಳೆದ ಹತ್ತಿ ಬೇರೆ ರಾಜ್ಯದಲ್ಲಿ ಸಂಸ್ಕರಣೆಗೊಂಡು ಅಲ್ಲಿಂದ ಇನ್ನೊಂದು ರೂಪ ಪಡೆದು ವಾಪಸ್ ತರಿಸಲಾಗುತ್ತಿದೆ. ಇಲ್ಲೇ ಎಲ್ಲ ಹಂತದ ಪ್ರಕ್ರಿಯೆ ನಡೆದು ಬಟ್ಟೆ ಸಿದ್ಧವಾಗಬೇಕು. ಈ ನಿಟ್ಟಿನಲ್ಲಿ ನಮ್ಮ ಪ್ರಯತ್ನವಿದೆ.

    ಉತ್ಪನ್ನಕ್ಕೆ ನೂತನ ರೂಪ, ತಾಂತ್ರಿಕ ಸಮಿತಿ ರಚನೆ

    ಉಡುಪಿಯ ಕೈಮಗ್ಗ ಸೀರೆಗೆ ಬಲು ಬೇಡಿಕೆ ಇದೆ. ಅದೇ ರೀತಿ ಮೊಳಕಾಲ್ಮೂರು, ಇಳಕಲ್ ಸೀರೆಗೂ ಒಂದು ಇಮೇಜ್ ಇದೆ. ಗುಳೇದಗುಡ್ಡ ಕಣಕ್ಕೆ ಬೇಡಿಕೆ ಕುಸಿಯಬಾರದು. ಹೀಗಾಗಿ ಸಾಂಪ್ರದಾಯಿಕ ಉತ್ಪನ್ನಕ್ಕೆ ಹೊಸ ರೂಪ ಕೊಡಲು ತಾಂತ್ರಿಕ ಸಮಿತಿ ರಚಿಸಲಾಗಿದೆ. ಅದು ವರದಿ ಕೊಡುತ್ತಿದ್ದಂತೆ ಮುಂದೆ ಕ್ರಮಕೈಗೊಳ್ಳಲಾಗುತ್ತಿದೆ. ಗುಳೇದಗುಡ್ಡದ ಕಣ ಡೈರಿ ಕವರ್ ರೀತಿ ಬಳಕೆ, ಉಡುಪಿ ಸೀರೆ ಡ್ರೆಸ್ ಮೆಟೀರಿಯಲ್ ಆಗಿ ಬಳಸುವಂತಾಗಬೇಕು ಎಂಬ ಆಲೋಚನೆಗಳಿವೆ. ಹಣಕಾಸು ಬಲ ತುಂಬಬೇಕೆಂಬ ಉದ್ದೇಶವೂ ಇದೆ ಎಂದು ಸಚಿವ ಶಂಕರಪಾಟೀಲ್ ಮುನೇನಕೊಪ್ಪ ತಿಳಿಸಿದರು.

    ಹೂಡಿಕೆದಾರರ ಸಮಾವೇಶಕ್ಕೆ ಚಿಂತನೆ: ಜವಳಿ ಕ್ಷೇತ್ರಕ್ಕೆ ಹೂಡಿಕೆದಾರರನ್ನು ಕರೆತರುವ ವಿಚಾರವಾಗಿ ಜಪಾನ್, ದಕ್ಷಿಣ ಕೊರಿಯಾ ಪ್ರವಾಸ ಹೋಗುತ್ತಿದ್ದು, ಅಲ್ಲಿಂದ ಬಂದ ಬಳಿಕ ಕೈಗಾರಿಕೆ ಇಲಾಖೆ ಜತೆಗೂಡಿ ಜಾಗತಿಕ ಹೂಡಿಕೆದಾರರ ಸಮಾವೇಶ ಮಾಡುವ ಉದ್ದೇಶವಿದೆ ಎಂದು ಶಂಕರಪಾಟೀಲ್ ಮುನೇನಕೊಪ್ಪ ಹೇಳಿದರು.

    ಬಿಗ್​ಬಾಸ್​​​ ಒಟಿಟಿಗೆ ಚಾಲನೆ; ಆರ್ಯವರ್ಧನ್​, ರೂಪೇಶ್ ಶೆಟ್ಟಿ​, ಸೋನು ಗೌಡ ಪ್ರವೇಶ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts