ಜಿಲ್ಲೆ

ಲಾಕ್​ಡೌನ್ ಬೇಡ ಅಂದ್ರೆ ನಿರ್ಬಂಧಗಳನ್ನು ಜನರು ಪಾಲಿಸಲಿ: ಮತ್ತೆ ಲಾಕ್​ ಸುಳಿವು ನೀಡಿದ ಸಚಿವ ಅಶೋಕ್

ಬೆಂಗಳೂರು: ಪಶ್ಚಿಮ ಬಂಗಾಳ, ದೆಹಲಿ, ಮುಂಬೈ ಮಾದರಿ‌ ಲಾಕ್​ಡೌನ್ ಬೇಡವೆಂದಾದರೆ ನಿರ್ಬಂಧಗಳನ್ನು ಜನರು ಚಾಚೂ ತಪ್ಪದೇ ಪಾಲಿಸಲಿ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.

ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅಧ್ಯಕ್ಷತೆಯಲ್ಲಿ ಬೆಂಗಳೂರು ಸಮಗ್ರ ಅಭಿವೃದ್ಧಿ ಕುರಿತು ವಿಡಿಯೋ ಸಂವಾದದ ಬಳಿಕ ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದರು. ಕೇಂದ್ರ ಘೋಷಿತ ಪಟ್ಟಿ ಪ್ರಕಾರ ಬೆಂಗಳೂರು ಕೆಂಪು ವಲಯದ ಪಟ್ಟಿಯಲ್ಲಿದ್ದು, ಇನ್ನಷ್ಟು ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವಾಗಿದೆ ಎಂದು ಹೇಳುವ ಮೂಲಕ ಕಠಿಣ ನಿರ್ಬಂಧಗಳ ಜಾರಿಯಾಗಲಿವೆ ಎಂಬ ಪರೋಕ್ಷ ಸುಳಿವು ನೀಡಿದರು‌.

ಸಿಎಂ ನೇತೃತ್ವದಲ್ಲಿ ಸಭೆ

ಸದ್ಯಕ್ಕೆ ಚಾಲ್ತಿಯಲ್ಲಿರುವ ನಿರ್ಬಂಧಗಳು ಜ.7ರ ಬೆಳಗ್ಗೆ 5ಕ್ಕೆ ಕೊನೆಗೊಳ್ಳಲಿದ್ದು, ಅದಕ್ಕೂ ಮುನ್ನವೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ ನಡೆಯಲಿದ್ದು, ತಜ್ಞರ ಸಮಿತಿ ಶಿಫಾರಸುಗಳನ್ನು ಚಾಚೂ‌ ತಪ್ಪದೇ ಪಾಲಿಸಲಾಗುವುದು ಎಂದರು.

ಆಸ್ಪತ್ರೆ, ಆಕ್ಸಿಜನ್ ವ್ಯವಸ್ಥೆ ಸೇರಿದಂತೆ ಅಗತ್ಯ ಆರೋಗ್ಯ ಸವಲತ್ತು ಕಲ್ಪಿಸಲು ಕ್ರಮವಹಿಸಿದ್ದು,‌ ಕಳೆದ ಬಾರಿಯ ಕಹಿ ಅನುಭವದ ಹಿನ್ನೆಲೆಯಲ್ಲಿ ಜನರ ಜೀವ ಮತ್ತು ಜೀವನ ರಕ್ಷಣೆಗಾಗಿ ಕರೊನಾ ನಿಯಂತ್ರಣ ಸರ್ಕಾರದ ಆದ್ಯತೆಯಾಗಿದ್ದು, ಕಾಂಗ್ರೆಸ್ ನ ಪಾದಯಾತ್ರೆ ಮತ್ತಿತರ‌ ಚಟುವಟಿಕೆಗಳ ಬಗ್ಗೆ ಸರ್ಕಾರ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಆರ್.ಅಶೋಕ್ ಪ್ರತಿಕ್ರಿಯಿಸಿದರು.