ಮಂಡ್ಯ: ಸರಿಯಾಗಿ ಬೈಕ್ ಓಡಿಸಿ ಎಂದಿದ್ದೇ ತಪ್ಪಾಯ್ತಾ? ಹಿರಿಯ ವ್ಯಕ್ತಿ ಎಂಬುದನ್ನು ನೋಡದೇ ಇಬ್ಬರು ದುಷ್ಕರ್ಮಿಗಳು ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಆತಂಕಕಾರಿ ಘಟನೆ ಹಾಡುಹಗಲಲ್ಲೇ ಮಂಡ್ಯ ತಾಲೂಕಿನ ಯಲಿಯೂರು ಬಳಿಯ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ನಡೆದಿದೆ. ದುಷ್ಕರ್ಮಿಗಳು ಲಾಂಗ್ ಹಿಡಿದು ಹಲ್ಲೆ ಮಾಡಿದ್ದಾರೆ.
ತೂಬಿನಕೆರೆ ಗ್ರಾಮದ ಶಂಕರೇಗೌಡ (60) ಎಂಬುವರ ಮೇಲೆ ಹಲ್ಲೆ ಮಾಡಿದ್ದಾರೆ. ಇನ್ನೂ ಸರಿಯಾಗಿ ಮೀಸೆ ಚಿಗುರದ ಯುವಕರಿಂದಲೇ ರೌಡಿಸಂ ನಡೆದಿದೆ.
ಪುಂಡರು ಹೆದ್ದಾರಿಯಲ್ಲಿ ಅಡ್ಡಾದಿಡ್ಡಿಯಾಗಿ ಬೈಕ್ ಓಡಿಸುತ್ತಿದ್ದರು. ಈ ವೇಳೆ ಬೈಕ್ ಸರಿಯಾಗಿ ಓಡಿಸಿ, ನಿಮ್ಮಿಂದ ಎಲ್ಲರಿಗೂ ತೊಂದರೆಯಾಗುತ್ತದೆ. ಈ ರೀತಿ ಓಡಿಸಿದ್ರೆ ಬೇರೆಯವರು ಸಾಯುತ್ತಾರೆ ಎಂದು ಶಂಕರೇಗೌಡ ಬುದ್ಧಿ ಹೇಳಿದ್ದರು. ಇಷ್ಟಕ್ಕೆ ಆಕ್ರೋಶಗೊಂಡು ದುಷ್ಟರು ಶಂಕರೇಗೌಡರನ್ನು ಅಡ್ಡಗಟ್ಟಿ ಲಾಂಗ್ನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.
ಹಲ್ಲೆಯಿಂದ ಗಂಭೀರ ಗಾಯವಾಗಿರುವ ವ್ಯಕ್ತಿಗೆ ಮಿಮ್ಸ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹಲ್ಲೆ ನಡೆಸುತ್ತಿರುವ ದೃಶ್ಯವನ್ನು ವಾಹನ ಸವಾರರೊಬ್ಬರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ಮಂಡ್ಯದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್)