ಜಿಲ್ಲೆ

ಕಳ್ಳರಿಗೆ ಹೆದರಿ ರಾಗಿಮೂಟೆಯಲ್ಲಿ ಚಿನ್ನಾಭರಣ ಬಚ್ಚಿಟ್ಟ ಪತ್ನಿ! ಮುಂದಾಗಿದ್ದು ಎಡವಟ್ಟು, ಆದ್ರೂ ಸುಖಾಂತ್ಯ ಕಂಡ ಪ್ರಕರಣ

ಮಂಡ್ಯ: ಗ್ರಾಮದ ಸುತ್ತಮುತ್ತ ಹೆಚ್ಚು ಕಳ್ಳತನವಾಗುತ್ತಿದ್ದ ಹಿನ್ನೆಲೆಯಲ್ಲಿ ಹೆಂಡತಿ ಮೂಟೆಯಲ್ಲಿ ಬಚ್ಚಿಟ್ಟಿದ ಸುಮಾರು ನಾಲ್ಕು ಲಕ್ಷ ರೂ ಮೌಲ್ಯದ ಚಿನ್ನಾಭರಣದ ಜತೆಗೆ ರಾಗಿಯನ್ನು ಗಂಡ ಮಾರಾಟ ಮಾಡಿದ್ದಾರೆ. ಆದರೆ ಅದೃಷ್ಟವಶಾತ್ ಬರೋಬರಿ 11 ದಿನದ ಬಳಿಕ ಮಾಲೀಕರಿಗೆ ಹಸ್ತಾಂತರ ಮಾಡುವ ಮೂಲಕ ಅಕ್ಕಿಗಿರಣಿ ಮಾಲೀಕರೂ ಆದ ಜೆಡಿಎಸ್ ಮಂಡ್ಯ ತಾಲೂಕು ಅಧ್ಯಕ್ಷ ತಿಮ್ಮೇಗೌಡ ಮಾನವೀಯತೆ ಮೆರೆದಿದ್ದಾರೆ.

ನಾಗಮಂಗಲ ತಾಲೂಕಿನ ಕಲ್ಲಿನಾಥಪುರ ಗ್ರಾಮದ ಕಲ್ಲೇಗೌಡ ಅವರ ಪತ್ನಿ ಲಕ್ಷ್ಮಮ್ಮ ಬೆಂಗಳೂರಿನ ಮಗಳ ಮನೆಗೆ ಹೋಗಲು ನಿರ್ಧರಿಸಿದ್ದಾರೆ. ಅಂತೆಯೇ ಅ.17ರಂದು ತಮ್ಮ ಬಳಿಯಿದ್ದ ಬ್ರಾಸ್‌ಲೈಟ್, ಎರಡು ಸರ, ಎರಡು ಜತೆ ಒಲೆ, ಒಂದು ಜತೆ ಮಾಟಿ ಸೇರಿದಂತೆ ಬರೋಬರಿ 75 ಗ್ರಾಂ ಚಿನ್ನಾಭರಣಗಳನ್ನು ರಾಗಿಯ ಮೂಟೆಯಲ್ಲಿ ಬಚ್ಚಿಟ್ಟು ಮಗಳ ಮನೆಗೆ ತೆರಳಿದ್ದಾರೆ. ಈ ವಿಷಯ ಕಲ್ಲೇಗೌಡ ಅವರಿಗೂ ತಿಳಿದಿರಲಿಲ್ಲ.

ಈ ನಡುವೆ ಹಣಕಾಸಿನ ಸಮಸ್ಯೆ ಎದುರಾದ ಕಾರಣ ಮೂಟೆಯಲ್ಲಿದ್ದ 70 ಕೆಜಿ ರಾಗಿಯನ್ನು ವ್ಯಕ್ತಿಯೊಬ್ಬರಿಗೆ ಮಾರಾಟ ಮಾಡಿದ್ದಾರೆ. ಇತ್ತ ಪತ್ನಿ ಊರಿಗೆ ವಾಪಸ್ ಬಂದರೂ ರಾಗಿ ಮಾರಾಟದ ಬಗ್ಗೆ ಪತಿ ತಿಳಿಸಿರಲಿಲ್ಲ. ಆಕೆಯೂ ಕೂಡ ಆ ಬಗ್ಗೆ ಗಮನಹರಿಸಿರಲಿಲ್ಲ. ಇನ್ನು ಈ ರೀತಿ ಹಳ್ಳಿಯಲ್ಲಿ ಸಂಗ್ರಹಿಸಿದ ರಾಗಿಯನ್ನು ಬಸರಾಳು ಗ್ರಾಮ ಶ್ರೀನಿವಾಸ ಸೂರಿ ಬಿನ್ನಿ ರೈಸ್‌ಮಿಲ್‌ನಲ್ಲಿ ಸಂಗ್ರಹಿಸಲಾಗುತ್ತಿತ್ತು. ಇಲ್ಲಿಂದ ಗ್ರಾಹಕರಿಗೆ ವಿತರಣೆಯಾಗುತ್ತಿತ್ತು. ಇನ್ನು ಮಾಲೀಕರು ಕೂಡ ಈ ಮೂಟೆಯನ್ನು ಗಮನಿಸಿರಲಿಲ್ಲ. ಆದರೆ ಈ ನಡುವೆ ಅಂದರೆ ನಾಲ್ಕು ದಿನದ ಹಿಂದೆ ರಾಗಿ ಮೂಟೆ ಸುರಿದ ವೇಳೆ ಚಿನ್ನಾಭರಣವಿದ್ದ ಪರ್ಸ್ ಸಿಕ್ಕಿದೆ. ನಂತರ ಪರಿಶೀಲಿಸಿದಾಗ ನಾಗಮಂಗಲದ ಮಹಾಲಕ್ಷ್ಮೀ ಜ್ಯುವೆಲರಿ ಅಂಗಡಿ ವಿಳಾಸ ಹಾಗೂ ಕಲ್ಲೇಗೌಡ ಹೆಸರಿನ ಬಿಲ್ ಸಿಕ್ಕಿದೆ.

ಈ ಮಾಹಿತಿ ಪಡೆದು ಜ್ಯುವೆಲರಿ ಅಂಗಡಿ ಮಾಲೀಕರಿಗೆ ಕರೆ ಮಾಡಿ ವಿಚಾರಿಸಲಾಗಿದೆ. ಬಳಿಕ ಕಲ್ಲೇಗೌಡ ಅವರನ್ನು ಸಂಪರ್ಕಿಸಿ ಆಧಾರ್ ಕಾರ್ಡ್‌ನೊಂದಿಗೆ ಬಸರಾಳಿಗೆ ಬಂದು ಚಿನ್ನಾಭರಣ ತೆಗೆದುಕೊಳ್ಳುವಂತೆ ಹೇಳಲಾಗಿತ್ತು. ಈ ಹಿನ್ನೆಲೆಯಲ್ಲಿ ಗುರುವಾರ ಕಲ್ಲೇಗೌಡ ಮತ್ತು ಲಕ್ಷ್ಮಮ್ಮ ದಂಪತಿ ದಾಖಲೆ ಕೊಟ್ಟು ಚಿನ್ನಾಭರಣ ಪಡೆದುಕೊಂಡಿದ್ದಾರೆ. ಈ ವೇಳೆ ಅವರ ಮುಖದಲ್ಲಿ ಸಂತಸ ಮನೆ ಮಾಡಿತ್ತು. ಇತ್ತ ತಿಮ್ಮೇಗೌಡ ಅವರ ಮಾನವೀಯತೆಗೆ ಜನರು ಶ್ಲಾಘನೆ ವ್ಯಕ್ತಪಡಿಸಿದರು.

ನಾವು ಒಳ್ಳೆಯದನ್ನು ಮಾಡಿದರೆ ನಮ್ಮ ಮಕ್ಕಳಿಗೂ ಒಳಿತಾಗುತ್ತದೆ ಎನ್ನುವ ಹಿರಿಯರ ಮಾತನ್ನು ಪಾಲನೆ ಮಾಡಿದ್ದೇನೆ. ಪರರ ಹಣ ಪಾಷಾಣ ಎನ್ನುವಂತಿದೆ. ಇವತ್ತಿನ ಕಾಲದಲ್ಲಿ ನಾವು ದುಡಿದ ಹಣ ನಮಗೆ ದಕ್ಕುವುದೇ ಕಷ್ಟ. ಹೀಗಿರುವಾಗ ಬೇರೆಯವರ ಹಣ ಬಳಕೆ ಮಾಡಿದರೆ ಅದರ ಶಾಪ ನಮ್ಮ ಮಕ್ಕಳಿಗೂ ತಟ್ಟುತ್ತದೆ. ಈ ಹಿನ್ನೆಲೆಯಲ್ಲಿ ಚಿನ್ನಾಭರಣವನ್ನು ಅದರ ಮಾಲೀಕರಿಗೆ ತಲುಪಿಸಿದ್ದೇವೆ. | ತಿಮ್ಮೇಗೌಡ, ಅಕ್ಕಿಗಿರಣಿ ಮಾಲೀಕ ಚಿನ್ನಾಭರಣದ ಬಗ್ಗೆ ನಾವು ಗಮನಿಸಿರಲಿಲ್ಲ. ಚಿನ್ನದ ಅಂಗಡಿ ಮಾಲೀಕರು ಕರೆ ಮಾಡಿದಾಗಲೇ ಗೊತ್ತಾಯಿತು. ಕಷ್ಟಪಟ್ಟಿದ ಸಂಪಾದಿಸಿದ ಹಣದಿಂದ ಖರೀದಿ ಮಾಡಿದ್ದೇವು. ಒಂದು ವೇಳೆ ಇವು ಸಿಗದಿದ್ದರೆ ಸಾಯುವವರೆಗೆ ನೋವು ಅನುಭವಿಸಬೇಕಿತ್ತು. ಆದರೆ ತಿಮ್ಮೇಗೌಡ ಅವರು ನಮ್ಮ ಚಿನ್ನವನ್ನು ತಲುಪಿಸಿದ್ದಾರೆ. ಈ ಕಾಲದಲ್ಲಿ ಹತ್ತು ರೂ ಸಿಕ್ಕರೂ ಕೊಡುವುದು ಕಷ್ಟ. ತಿಮ್ಮೇಗೌಡ ಅವರು ನಮಗೆ ದೇವರ ಸಮಾನ. ಅವರ ಕುಟುಂಬದವರು ಯಾವಾಗಲೂ ಚೆನ್ನಾಗಿರಲಿ. | ಕಲ್ಲೇಗೌಡ/ಲಕ್ಷ್ಮಮ್ಮ ದಂಪತಿ