ಬೆಳಗಾವಿ: ಸಚಿವ ಕೆ.ಎಸ್. ಈಶ್ವರಪ್ಪ ಮೇಲೆ 40% ಕಮಿಷನ್ ಆರೋಪ ಮಾಡಿ ಆತ್ಮಹತ್ಯೆ ಶರಣಾಗಿರುವ ಗುತ್ತಿಗೆದಾರ ಸಂತೋಷ ಪಾಟೀಲ್ ಅಂತ್ಯಕ್ರಿಯೆ ಇಂದು ನಡೆಯಲಿದ್ದು, ಅವರ ಪಾರ್ಥಿವ ಶರೀರ ಬೆಳಗಾವಿ ಗಡಿ ತಲುಪಿದೆ.
ಎಸ್ಕಾರ್ಟ್ ಮುಖಾಂತರ ಪಾರ್ಥಿವ ಶರೀರವನ್ನು ಬೆಳಗಾವಿ ಜಿಲ್ಲಾ ಮತ್ತು ನಗರ ಪೊಲೀಸರು ಸ್ವೀಕರಿಸಿದ್ದಾರೆ. ಆದರೆ, ಸಂತೋಷ್ ಮೃತದೇಹ ಹುಟ್ಟೂರಿಗೆ ಹೋಗುತ್ತಿದ್ದಂತೆ ಮೃತ ಸಂತೋಷ ಸಹೋದರ ಬಸನಗೌಡ ಪಾಟೀಲ್ ಆರೋಪಿಗಳ ಬಂಧನಕ್ಕೆ ಪಟ್ಟು ಹಿಡಿದಿದ್ದಾರೆ.
ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಪೊಲೀಸ್ ಕಮೀಷನರ್ ಕಚೇರಿ ಮುಂದೆ ಪ್ರತಿಭಟನೆ ಮಾಡಲು ಶವ ತೆಗೆದುಕೊಂಡ ಹೋಗಲು ಬಸನಗೌಡ ಪಾಟೀಲ ಮುಂದಾದರು. ಕಮೀಷನರ್ ಕಚೇರಿಗೆ ಹೋಗುವಾಗ ಮಾರ್ಗ ಮಧ್ಯದಲ್ಲೆ ಪೊಲೀಸರು ತಡೆದರು. ಈ ವೇಳೆ ಬಸನಗೌಡ ಪಾಟೀಲ ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.
ಆರೋಪಿಗಳನ್ನ ಬಂಧಿಸುವಂತೆ ಪಟ್ಟು ಹಿಡಿದ ಬಸನಗೌಡ ಪಾಟೀಲ, ಬೇಕಾದ್ರೆ ನಿಮ್ಮ ಮೇಲಾಧಿಕಾರಿಗಳಿಗೆ ಮಾತನಾಡಿ ಎಂದರು. ಈ ವೇಳೆ ಮೇಲಾಧಿಕಾರಿಗಳ ಜತೆಗೆ ಡಿಸಿಪಿ ರವೀಂದ್ರ ಗಡಾದೆ ಮಾತನಾಡಿದರು. ಆರೋಪಿಗಳನ್ನ ಬಂಧಿಸುವ ಭರವಸೆ ನೀಡಿದ ಹಿನ್ನೆಲೆ ಕುಟುಂಬಸ್ಥರು ಪಟ್ಟು ಸಡಿಲಿಸಿದರು.
ಸದ್ಯ ಸಂತೋಷ್ ಮೃತದೇಹವನ್ನು ಹುಟ್ಟೂರು ಕಡೆ ತೆಗೆದುಕೊಂಡು ಹೋಗಲಾಗಿದೆ. ಕೆಲಕಾಲ ಗೊಂದಲ ವಾತಾವರಣ ಮೂಡಿ ಆತಂಕ ಸೃಷ್ಟಿಯಾಗಿತ್ತು. ಈಗ ವಾತಾವರಣ ತಿಳಿಯಾಗಿದೆ. (ದಿಗ್ವಿಜಯ ನ್ಯೂಸ್)